ಮಹಿಳೆ ತನ್ನನ್ನು ತಾನು ಕಾಪಾಡಿಕೊಳ್ಳುವಷ್ಟು ಬಲಿಷ್ಟಳಾಗಬೇಕು: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್

ತುಮಕೂರು : ಕಾಯಿದೆ-ಕಾನೂನುಗಳ ಮೇಲೆ ಅವಲಂಬಿತರಾಗದೆ ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ತನ್ನನ್ನು ತಾನು ಕಾಪಾಡಿಕೊಳ್ಳುವಷ್ಟು  ಬಲಿಷ್ಟಳಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ತಡೆಯಲು ಸಾಕಷ್ಟು ಕಾಯಿದೆ, ಕಾನೂನುಗಳಿದ್ದರೂ ಮಹಿಳೆ ತನ್ನನ್ನು ತಾನು ಕಾಪಾಡಿಕೊಳ್ಳುವಷ್ಟು ಬಲಿಷ್ಟಳಾಗಬೇಕು. ವೇದಪುರಾಣ, ವಚನಗಳ ಕಾಲದಿಂದಲೂ ಮಹಿಳೆಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದರೂ ಮಹಿಳಾ ಶೋಷಣೆ ಇನ್ನೂ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸ್ವತಂತ್ರಳಾಗಬೇಕೆಂಬ ಹಿನ್ನೆಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಹಿಳಾ ದಿನ ಆಚರಣೆಗೆ ಮಾತ್ರ ಸೀಮಿತವಾಗದೆ, ರೂಢಿಗೆ ಬಂದಾಗ ಮಾತ್ರ ಮಹಿಳೆಯರ ಅಭ್ಯುದಯ ಸಾಧ್ಯವೆಂದು ತಿಳಿಸಿದರಲ್ಲದೆ, ನಾನು ಉನ್ನತ ಸ್ಥಾನಕ್ಕೇರಲು ನನ್ನ ತಾಯಿ, ಅಕ್ಕತಂಗಿ, ಹೆಂಡತಿ, ಮಗಳ ಶ್ರಮವಿದೆ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಂತೆ ಮಹಿಳೆಯ ಸಾಧನೆಗೆ ಮಹಿಳೆಯರ ಬೆಂಬಲವಿರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಿದ್ದು ಯಾರೂ ಲಿಂಗ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಮೇಲಾಗುವ ಶೋಷಣೆಗಳನ್ನು ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಶಾಲಾಕಾಲೇಜು ತೊರೆದ ಹೆಣ್ಣು ಮಕ್ಕಳನ್ನು ಮತ್ತೆ ವಿದ್ಯಾವಂತರನ್ನಾಗಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಮುಖ್ಯವಾಗಬೇಕು. ಅಪೌಷ್ಟಿಕತೆ, ಬಾಲ್ಯವಿವಾಹ ತಡೆಗಟ್ಟಲು ಪ್ರತಿಯೊಬ್ಬರು ರಾಯಭಾರಿಗಳಾಗಬೇಕು. ಅಂಗನವಾಡಿಯಿಂದ ಹೊರಗುಳಿದಿರುವ ಮಕ್ಕಳನ್ನು ಅಂಗನವಾಡಿಗೆ ಕರೆತರುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್. ನಟರಾಜ್ ಪ್ರಸ್ತಾವಿಕ ನುಡಿಗಳನ್ನಾಡಿ, ಮಹಿಳೆಯರ ಶ್ರಮದಿಂದ ಮಧುಗಿರಿ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ(ರಿ)ಯು ರಾಜ್ಯ ಮಟ್ಟದ ಅತ್ಯುತ್ತಮ ಒಕ್ಕೂಟ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ|| ರಜನಿ ಮಾತನಾಡಿ, ನಲವತ್ತು ವರ್ಷ ದಾಟಿದ ಮಹಿಳೆಯರು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕುಮಾಸಿಕ ಮುಟ್ಟು ನಿಂತ ಮರುದಿನ, ಸ್ನಾನ ಮಾಡುವಾಗ ಎದೆಯಲ್ಲಿ ಗಂಟು ಇದೆಯಾ? ಎಂದು ಪರೀಕ್ಷಿಸಿಕೊಳ್ಳಬೇಕು. ಪಿಸಿಓಡಿ, ಮಂಡಿ ನೋವು ಸಮಸ್ಯೆಗೆ ನಿತ್ಯ ವ್ಯಾಯಾಮ ಮಾಡುವುದು ಅಗತ್ಯ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಜಿಲ್ಲಾ ಕಾರಾಗೃಹ ಸಹಾಯಕ ಅಧೀಕ್ಷಕಿ ಶಾಂತಮ್ಮ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ, ಕಾರ್ಯಕ್ರಮ ನಿರೂಪಣಾಧಿಕಾರಿ ಶ್ರೀಧರ್, ಶಿಶು ಅಭಿವೃದ್ಧಿ ಯೋಜನೆಯ ಶಿವಕುಮಾರಯ್ಯ ಹಾಗೂ ಎಂಪ್ರೆಸ್ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!