ಶಿರಾ: ಬಗೆಹರಿಯದ ಭೂತಪ್ಪನ ಗುಡಿ ವ್ಯಾಜ್ಯ.

ತುಮಕೂರು:ಶಿರಾ ತಾಲೂಕಿನ ಕೆ.ರಂಗೇನಹಳ್ಳಿ ಭೂತಪ್ಪನ ಗುಡಿ ದೇವಾಲಯಕ್ಕೆ ಸಂಬಂಧಪಟ್ಟಂತಹ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಸಹ ಅಕ್ರಮವಾಗಿ ರಚನೆಯಾಗಿರುವ ಟ್ರಸ್ಟ್‌ನ ಕೆಲವರು ದೇವಾಲಯದ ಹುಂಡಿ ಒಡೆಯಲು ಮುಂದಾಗಿದ್ದು,ಇದಕ್ಕೆ ಜಿಲ್ಲಾಡಳಿತ,ತಾಲೂಕು ಆಡಳಿತ ಅವಕಾಶ ಮಾಡಿಕೊಡಬಾರದು ಎಂದು ಭೂತಪ್ಪನ ಗುಡಿ ಪೂಜಾರುಗಳ ಕುಟುಂಬದ ಆರ್.ಕೆ.ಸದಾನಂದಗೌಡ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿರಾ ತಾಲೂಕು ತಾವರೆಕೆರೆ ಹೋಬಳಿಯ ಕೆ.ರಂಗನೇಹಳ್ಳಿಯಲ್ಲಿರುವ ಭೂತಪ್ಪನ ಗುಡಿಗೆ ಜಿಲ್ಲೆಯಲ್ಲದೆ, ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಇನ್ನಿತರ ರಾಜ್ಯಗಳಿಂದ ಭಕ್ತಾಧಿಗಳು ನಡೆದುಕೊಳ್ಳುತ್ತಿದ್ದು,ದಿನಕ್ಕೆ 30 ಸಾವಿರದಿಂದ 50 ಸಾವಿರದವರೆಗೆ ಆದಾಯವಿದೆ. ವರ್ಷಕ್ಕೆ 1 ರಿಂದ 1.50 ಕೋಟಿಯವರೆಗೆ ಆದಾಯವಿದೆ. ಆದರೆ ಈ ಆದಾಯವನ್ನು ದೇವಾಲಯದ ಅಭಿವೃದ್ದಿಗೆ ಬಳಕೆ ಮಾಡುತ್ತಿಲ್ಲ. ಮಾಜಿ ಸಚಿವರೊಬ್ಬರ ಕುಮ್ಮಕ್ಕಿನಿಂದ ದೇವಾಲಯಕ್ಕೆ ಸಂಬಂಧಪಡದ ವ್ಯಕ್ತಿಗಳನ್ನು ಸೇರಿಸಿಕೊಂಡು ಟ್ರಸ್ಟ್ ರಚಿಸಿ, ದೇವಾಲಯದ ಅದಾಯವನ್ನು ಲಪಟಾಯಿಸಲಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ದೇವಾಲಯದ ಹುಂಡಿ ಒಡೆಯಲು ಅವಕಾಶ ನೀಡಬಾರದು ಎಂದರು.

ಶಿರಾ ತಾಲೂಕು ತಾವರೆಕೆರೆ ಹೋಬಳಿ ಭೂತಪ್ಪನಗುಡಿಗೆ 400 ರಿಂದ 500 ವರ್ಷಗಳ ಇತಿಹಾಸವಿದೆ.ನನ್ನ ತಂದೆಯವರು ಸೇರಿದಂತೆ ನಾಲ್ಕು ಜನ ಅಣ್ಣ ತಮ್ಮಂದಿರುವ ಮಾತ್ರ ದೇವಾಲಯದ ಪೂಜಾರಿಕೆ ನಡೆಸಿಕೊಂಡು ಹೋಗುತ್ತಿದ್ದು, ಟ್ರಸ್ಟ್‌ನಲ್ಲಿ ನನ್ನ ತಂದೆಯ ತಮ್ಮಂದಿರು ಹಾಗೂ ನನ್ನನ್ನು ಕೈಬಿಟ್ಟು, ದೇವಾಲಯಕ್ಕೆ ಸಂಬಂಧಿಸದವರನ್ನು ಸೇರಿಸಿ, 21 ಜನರ ಅಕ್ರಮ ಟ್ರಸ್ಟ್ ರಚಿಸಿಕೊಂಡಿದ್ದಾರೆ. ದೇವಾಲಯಕ್ಕೆ ಸಾಕಷ್ಟು ಆದಾಯವಿದ್ದರೂ ಅದನ್ನು ದೇವಾಯದ ಅಭಿವೃದ್ದಿ ಮತ್ತು ಭಕ್ತರ ಅನುಕೂಲಕ್ಕೆ ಬಳಕೆ ಮಾಡುತ್ತಿಲ್ಲ.ದೇವಾಲಯದ ಬಳಿ ಅಲ್ಪಸ್ವಲ್ಪ ಅಭಿವೃದ್ದಿ ಕಾರ್ಯಗಳು ನಡೆದಿದ್ದರೆ ಅದು ಸರಕಾರದ ಅನುದಾನ ಮತ್ತು ಭಕ್ತರು ನೀಡಿದ ಸಹಕಾರದಿಂದ ಮಾತ್ರ. ಹಾಗಾಗಿ ಟ್ರಸ್ಟ್ ಹುಂಡಿಯ ಹಣ ಬಳಕೆ ಮಾಡದಂತೆ ಕ್ರಮ ವಹಿಸಬೇಕು ಹಾಗೂ ಬಂದ ಹಣವನ್ನು ದೇವಾಲಯದ ಅಭಿವೃದ್ದಿಗೆ ಬಳಕೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಆರ್.ಕೆ.ಸದಾನಂದಗೌಡ ತಿಳಿಸಿದರು.

ಭೂತಪ್ಪನ ಗುಡಿ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕುರಿತು ಶಿರಾ ತಹಶೀಲ್ದಾರ್,ಮಧುಗಿರಿ ಉಪವಿಭಾಗಾಧಿ ಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದೆ.ಅಲ್ಲದೆ ಸಿವಿಲ್ ನ್ಯಾಯಾಲಯದಲ್ಲಿ  ಕೇಸ್ ಸಂಖ್ಯೆ ಓ.ಎಸ್, ನಂ 201/2015 ದಾಖಲಾಗಿದ್ದು,ನ್ಯಾಯಾಲಯದಲ್ಲಿ ಕೇಸು ದಾಖಲಾದ ನಂತರ ನ್ಯಾಯಾಲಯಕ್ಕೂ ಮಾಹಿತಿ ನೀಡದೆ ಟ್ರಸ್ಟ್ ರಚಿಸಿ, ದೇವಾಲಯದ ಹಣವನ್ನು ಲೂಟಿ ಒಡೆಯುತ್ತಿದ್ದು,ಇದರ ವಿರುದ್ದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿಯೂ ದಾವೆ ಹೂಡಿದ್ದು, ಆರೋಪಿಗಳಿಗೆ ನ್ಯಾಯಾಲಯ ತುರ್ತು ನೊಟೀಸ್ ನೀಡಿದೆ. ಆದಾಗ್ಯೂ ಹುಂಡಿ ತೆರೆಯುವ ಪ್ರಯತ್ನ ನಡಸುತ್ತಿದ್ದು, ಇದನ್ನು ಜಿಲ್ಲಾಡಳಿತ ತಡೆಯುವಂತೆ ಆಗ್ರಹಿಸಿದರು.

ವೇಳೆ ಸುದ್ದಿಗೋಷ್ಠಿಯಲ್ಲಿ ಭೂತಪ್ಪನ ಗುಡಿ ಪೂಜಾರರಾದ ಬಾಳಪ್ಪ, ಭೂತಣ್ಣ, ಮೊಸರುಕುಂಡಿ ರಂಗನಾಥ್, ಭೂತಪ್ಪ ಪುರಲೇಹಳ್ಳಿ, ಗೋವಿಂದಪ್ಪ, ನಾಗರಾಜು, ಮೊಸರುಕುಂಟೆ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!