ತುರುವೇಕೆರೆ :ಮಾಯಸಂದ್ರ ಗ್ರಾ.ಪಂ.ವ್ಯಾಪ್ತಿಯ ಸರ್ಕಾರಿ‌ ಬೋರವೆಲ್ ನೀರಿನ ದುರುಪಯೋಗ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ಕಾರಿ ಬೋರ್ ವೆಲ್ ನ ನೀರಿನ ದುರುಪಯೋಗದ ಆರೋಪದ ಕುರಿತು ಮಾಯಸಂದ್ರ ಗ್ರಾಮದ ಸಾರ್ವಜನಿಕ ವಲಯದಲ್ಲಿ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಾಯಸಂದ್ರ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಸರ್ಕಾರಿ ಬೋರ್ ವೆಲ್ ನಿಂದ ಕೆಲಮಂದಿ ಕಾನೂನುಬಾಹಿರವಾಗಿ ಪೈಪ್ ಲೈನ್ ಮೂಲಕ ನೀರಿನ ಸಂಪರ್ಕ ಪಡೆದು ಗ್ರಾಮ ಪಂಚಾಯಿತಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಹಾಗೂ ವೈಯಕ್ತಿಕವಾಗಿ ಕೆಲ ಮನೆಗಳ ಸಂಪ್ ಹಾಗೂ ತಮ್ಮ ತಮ್ಮ ತೋಟಗಳಿಗೆ ನೀರನ್ನು ಹರಿಸಿ ಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಆರೋಪದ ಬಗ್ಗೆ ಕೆಲವು ಸಾಕ್ಷಾಧಾರಗಳ ಮೇರೆಗೆ ಗ್ರಾಮ ಪಂಚಾಯಿತಿಗೆ ಲಿಖಿತ ರೂಪದಲ್ಲಿ ಸ್ಥಳೀಯರು ದೂರು ನೀಡಿದ್ದಾರೆ.

ಹಲವು ಬಾರಿ ಈ ಕುರಿತು ಸ್ಥಳೀಯರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಳೆಯ ಆಡಳಿತಕ್ಕೂ ದೂರು ನೀಡಿದ್ದರು ಕ್ರಮ ಕೈಗೊಳ್ಳಲಿಲ್ಲ, ಪ್ರಸ್ತುತ ಗ್ರಾಮ ಪಂಚಾಯಿತಿ ಆಡಳಿತದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತವಾಗಿ ಪಡೆದಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ನೂತನ ಪಿ.ಡಿ.ಒ. ಶ್ರೀನಿವಾಸಮೂರ್ತಿ ಸ್ಥಳಕ್ಕೆ ಆಗಮಿಸಿ,ನೋಟಿಸ್ ನೀಡಿ ಮುಂದಿನ ಗ್ರಾ.ಪಂ.ಸಭೆಯಲ್ಲಿ ಅನಧಿಕೃತವಾಗಿ ಪಡೆದಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ ಎಂಬುದು ತಿಳಿದುಬಂದಿದೆ.ಒಟ್ಟಾರೆ ಗ್ರಾಮದ ಪ್ರಜ್ಞಾವಂತ ವಿದ್ಯಾರ್ಥಿಗಳು ಹಾಗೂ ಹಿರಿಯರು ಸಾರ್ವಜನಿಕ ವಲಯದಲ್ಲಿ ಇಂತಹ ನಿಯಮಬಾಹಿರ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನದ ಸಹಕಾರ ನೀಡಬೇಕು ಮತ್ತು ಇಂತಹ ಚಟುವಟಿಕೆಗಳಿಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಮೆಚ್ಚುಗೆ ಪಡೆಯಬೇಕೆಂದು ಎಲ್ಲೆಡೆ ಚರ್ಚೆ ನಡೆಸುತ್ತಿದ್ದಾರೆ.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!