Tumakauru: 800 ವರ್ಷಗಳ ಪುರಾತನ ಇತಿಹಾಸ ಇರುವ ಬವನಾಸಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ (Treasure hunt) ನಿಧಿಗಾಗಿ ನಿಧಿಗಳ್ಳರು ಶೋಧ ನಡೆಸಿರುವ ಘಟನೆ ನಡೆದಿದೆ.
ತುಮಕೂರು ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಹಳ್ಳಿಯ ಹೊರವಲಯದಲ್ಲಿ ಇರುವ ಬವನಾಸಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೇ ಘಟನೆ ನಡೆದಿದ್ದು, ಅರ್ಚಕರು ಕಳೆದ ಶನಿವಾರ ಬೆಳಗ್ಗೆ ಪೂಜೆ ಮಾಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.
ದೊಡ್ಡ ಗಾತ್ರದ ಬಂಡೇಯಲ್ಲೇ ಕೆತ್ತಲಾದ ಈ ಬವನಾಸಿ (Anjaneya temple)ಆಂಜನೇಯ ಸ್ವಾಮಿಯ ಅಡಿಯಲ್ಲಿ ನಿಧಿ ಇದೆ ಅಂತಾ ಮೂರು ಕಡೆ ಕಿಂಡಿ ತೋಡಿ ನಿಧಿ ಹೊತ್ತೊಯ್ಯಲು ನಿಧಿ ಚೋರರು ಪ್ರಯತ್ನ ನಡೆಸಿದ್ದಾರೆ. ಬಡೆಯ ಅಡಿಯಲ್ಲಿ ನಿಧಿ ಸಿಗದ ಕಾರಣ ಕೊರೆದ ಜಾಗಕ್ಕೆ ಸೀಮೆಂಟ್ನಿಂದ ಪ್ಯಾಕ್ ಮಾಡಿದ್ದಲ್ಲದೆ, ಪೇಂಟ್ ಕೂಡ ಬಳಿದು ಯಾರಿಗೂ ಗೊತ್ತಾಗದ ರೀತಿ ಮಾಡಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಿಧಿ ಚೋರರು ತನ್ನ ಮಾಟ-ಮಂತ್ರದ ಕೈಚಳಕದ ಮೂಲಕ ಬವನಾಸಿ ಆಂಜನೇಯ ಸ್ವಾಮಿಯನ್ನ ಭಿನ್ನ ಮಾಡಿದ್ದಾರೆ. ದೇವರನ್ನ ಭಿನ್ನ ಮಾಡಿದ್ರೆ, ನಿಧಿ ತೆಗೆಯಲು ಸಲೀಸು ಅಂತಾ ನಿಧಿ ಚೋರರು ಈ ಕೃತ್ಯ ಎಸಗಿದ್ದಾರೆ. ನಿಧಿಗಾಗಿ ಅಗೆದ ಜಾಗದಲ್ಲಿ ಅರಿಶಿನ-ಕುಂಕುಮ, ನಿಂಬೆ ಹಣ್ಣು ಸೇರಿ ಇನ್ನಿತರೇ ವಸ್ತುಗಳು ಇವೆ. ಇನ್ನಾದರೂ ಪೊಲೀಸರು ಈ ದೇವಸ್ಥಾನಕ್ಕೆ ಭದ್ರತೆ ನೀಡಬೇಕು ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.