ತುರುವೇಕೆರೆ: ಪಾರದರ್ಶಕ ಆಡಳಿತಕ್ಕಾಗಿ ಮೂರು ವರ್ಷಗಳಿಗೆ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ನೀಡಿ”:ಎಂ.ಆರ್.ಗಿರೀಶ್.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕೃಷಿ ರೈತ ಬಂಧು ವೇದಿಕೆ(ರಿ) ರಾಜ್ಯ ರೈತ ಸಂಘಟನೆಯ ರಾಜ್ಯ ಸಮಿತಿ ಸಭೆ ಹಾಗೂ ಮುತ್ತುಗದಹಳ್ಳಿ ಗ್ರಾಮ ಘಟಕ ಶಾಖೆ ಉದ್ಘಾಟನಾ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯ ನಂತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮುತ್ತುಗದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಆರ್.ಗಿರೀಶ್ ರವರು ಮಾತನಾಡಿ, ನಮ್ಮ ಸಂಘಟನೆಯನ್ನು ಪಕ್ಷಾತೀತವಾಗಿ ರಾಜ್ಯ ವ್ಯಾಪ್ತಿ ಉತ್ತಮವಾಗಿ ಬಲ ಪಡಿಸುತ್ತಿದ್ದೇವೆ. ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಘಟನೆಯು‌ ಹೋರಾಟದಲ್ಲಿ ಹಿಂದೆ ಉಳಿದಿದ್ದು, ಮುಂದಿನ ದಿನಗಳಲ್ಲಿ ರೈತರ ಪರವಾಗಿ ಹೋರಾಟಕ್ಕೆ ನಮ್ಮ ಸಂಘಟನೆಯು ಸಿದ್ಧವಾಗಿದೆ ಎಂದರು. ಸರ್ಕಾರಗಳಿಂದ ದೊರೆಯುತ್ತಿರುವ ಹಲವು‌ ಸೌಲಭ್ಯಗಳು ರೈತರಿಗೆ ನೇರವಾಗಿ ಸಿಗುತ್ತಿಲ್ಲ. ದಲ್ಲಾಳಿಗಳ ಪಾಲಾಗುತ್ತಿವೆ. ಕೃಷಿ ಇಲಾಖೆಯಲ್ಲಿ ಅವ್ಯವಹಾರಗಳು ತಾಂಡವವಾಡುತ್ತಿದ್ದು, ರೈತರಿಗೆ ಸಿಗುವಂತಹ ಸವಲತ್ತುಗಳು ಉಳ್ಳವರ ಪಾಲಾಗುತ್ತಿದೆ. ತಾಲೂಕಿನಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲಸವಾಗಬೇಕೆಂದರೆ ಮೊದಲು ಎಲ್ಲಾ ಇಲಾಖೆಗಳಲ್ಲಿ ಕನಿಷ್ಠ 2-3 ವರ್ಷಗಳ ಕಾಲವಷ್ಟೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಆದರೆ ಕೆಲ‌ ಇಲಾಖೆಗಳಲ್ಲಿ5-6 ವರ್ಷಗಳ ಕಾಲ ಕೆಲಸ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ‌ ಅವ್ಯವಹಾರಗಳು ನಡೆಯಲು ಇದು ಮೂಲ ಕಾರಣವಾಗುತ್ತಿದೆ. 3 ವರ್ಷಗಳಿಗೆ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಪಾರದರ್ಶಕ ಆಡಳಿತ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರಿಗೆ ಹಾಗೂ ಬಡ ಮಧ್ಯಮ ವರ್ಗದ ಜನರಿಗೆ ಭಾರಿ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕೂಡಲೇ ಕೇಂದ್ರ ಸರ್ಕಾರ ರೈತರ ಹಾಗೂ‌‌ ಬಡವರ ಕಾಳಜಿವಹಿಸಿ ಕೂಡಲೇ ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಇಲ್ಲವಾದರೆ ಸಂಘಟನೆಯಿಂದ ರಾಜ್ಯ ವ್ಯಾಪ್ತಿ ಕರೆಕೊಟ್ಟು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು ಹಾಗೂ ಕೊವೀಡ್-19ರ ಎರಡನೇ ಅಲೆಯಲ್ಲಿ ಶ್ರಮವಹಿಸಿರುವ ತುರುವೇಕೆರೆ ತಾಲೂಕು ಆಡಳಿತಕ್ಕೆ ವಿಶೇಷವಾಗಿ ಸಂಘಟನೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ರಾಜ್ಯಾಧ್ಯಕ್ಷರಾದ ಹೊನ್ನೇಶ್ ಗೌಡ ರವರು ಮಾತನಾಡಿ ಯಾವುದೇ ಸರ್ಕಾರಗಳು ಬಂದರೂ ಸಹಾ ರೈತರ ನೆರವಿಗಾಗಿ, ರೈತರ ಕಷ್ಟಕಾಗಿ ಸ್ಪಂದಿಸದಿರುವುದು ನಮ್ಮ ದುರ್ದೈವವೇ ಸರಿ ಎಂದರು. ಕೃಷಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಮೊದಲು ಕಡಿವಾಣ ಹಾಕಬೇಕು. ರೈತರಿಗೆ ದೊರೆಯುವ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪುವಂತಹ ಕೆಲಸವಾಗಬೇಕು. ದಲ್ಲಾಳಿಗಳ‌ ಹಾವಳಿ ನಿಲ್ಲಬೇಕು. ನಮ್ಮ ಸಂಘಟನೆಯು ಸದಾ ರೈತರ ಪರ ಕಾಳಜಿ ಹೊಂದಿದ್ದು, ರೈತ ಪರ ಹೋರಾಟದ ಹಾದಿಯಲ್ಲಿ ಸಾಗುವುದಾಗಿ ತಿಳಿಸಿದರು. ಈ ವೇಳೆ ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ಸಂದೀಪ್, ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷರಾಗಿ ಪ್ರವೀಣ್ ಹಾಗೂ ಮುತ್ತುಗದಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ಅಭಿಷೇಕ್, ಪ್ರಧಾನ ಕಾರ್ಯದರ್ಶಿಯಾಗಿ ಲೋಹಿತ್ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಸಿರು ಶಾಲು ಹೊದಿಸಿ ಅಧಿಕೃತ ಗುರುತಿನ ಪತ್ರ ನೀಡುವುದರ ಮೂಲಕ ಅಧಿಕಾರ ನೀಡಲಾಯಿತು.

ಪತ್ರಿಕಾ ವಕ್ತಾರರಾದ ಮಂಜುನಾಥ್ ಕಲ್ಲೂರು ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಮತ್ತು ಕೃಷಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣವಾಕಬೇಕು. ಖಾಸಗೀಕರಣ ಎನ್ನುವ ಹೆಸರಿನಲ್ಲಿ ರೈತರಿಗೆ ಬಡವರಿಗೆ ಅನ್ಯಾಯವಾಗದಂತೆ ಬಡವರ ಹಾಗೂ ರೈತರ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುತ್ತುಗದಹಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳಾದ ದಿನೇಶ್, ಹರೀಶ್, ಸುದರ್ಶನ್, ನಟರಾಜು, ಕುಮಾರ್, ಶಂಕರಪ್ಪ ಹಾಗೂ ರಾಜ್ಯ ಕಾರ್ಯದರ್ಶಿ ದಿಲ್ದಾರ್ ಪಾಷಾ, ಖಜಾಂಚಿ ರವಿಕುಮಾರ್, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಚಿನ್ ಮಾಯಸಂದ್ರ, ಮುಖಂಡರಾದ ರಾಜೇಂದ್ರಕುಮಾರ್, ಹೊರಕೆರೆ ಶ್ರೀನಿವಾಸ್, ವೆಂಕಟೇಶ್, ಹೇಮಂತ್ ಕುಮಾರ್, ಭೈರಪ್ಪನವರು, ಗ್ರಾ. ಪಂ.ಸದಸ್ಯರಾದ ತಮ್ಮಯ್ಯ, ಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ-ಸಚಿನ್ ಮಾಯಸಂದ್ರ.

error: Content is protected !!