ತುಮಕೂರು: ವಿಶ್ವ ವಿಖ್ಯಾತ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯ ಮುಖ್ಯಧ್ವಾರ ಹಾಗೂ ಟ್ರೇಡರ್ ನ ಬೀಗ ಮುರಿದು 3 ಟನ್ ಗು ಅಧಿಕ ಕೊಬ್ಬರಿ ಕಳವು ಮಾಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿರುವ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಎಪಿಎಂಸಿಯ ಮುಖ್ಯ ಧ್ವಾರದ ಬೀಗ ಮುರಿದು ಬಳಿಕ ನಾಗರಾಜ್ ಎಂಬುವರ ಒಡೆತನಕ್ಕೆ ಸೇರಿದ ಗಂಗಾ ಟ್ರೇಡರ್ಸ್ ನ ಅಂಗಡಿ ಬೀಗ ಮುರಿದು 25 ಕೆಜಿ ಹಾಗೂ 45 ಕೆ ಜಿ ತೂಕದ ಒಟ್ಟು 125 ಚೀಲ ಕೊಬ್ಬರಿ ಕಳವು ಮಾಡಲಾಗಿದೆ. ಲಕ್ಷಾಂತರ ಮೌಲ್ಯದ ಒಟ್ಟು 3635 ಕೆಜಿ ಕೊಬ್ಬರಿ ಕಳವು ಮಾಡಿದ್ದಾರೆ.
ಕೊಬ್ಬರಿಯನ್ನ ಲಾರಿಯಲ್ಲಿ ತುಂಬಿ ಸಾಗಿಸಿದ್ದಾರೆ ಎನ್ನಲಾಗಿದ್ದು ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಕೊಬ್ಬರಿ ಮಾರುಕಟ್ಟೆಯಲ್ಲಿ ಮುಖ್ಯದ್ವಾರದ ಬೀಗ ಮುರಿದು ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿರುವುದು ಭದ್ರತಾ ವೈಪಲ್ಯಕ್ಕೆ ಸಾಕ್ಷಿಯಾಗಿದೆ.
ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು, ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್, ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.