ಅನೈತಿಕ ಚಟುವಟಿಕೆಯ ತಾಣವಾದ ತಿಪಟೂರು ಖಾಸಗಿ ಬಸ್ ನಿಲ್ದಾಣ.

ತಿಪಟೂರು: ಎಲ್ಲಿ ನೋಡಿದರೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮದ್ಯದ ಬಾಟಲಿಗಳು,ಅಲ್ಲಲ್ಲಿ ಮದ್ಯ ಸೇವಿಸಿ, ಲೋಕದ ಅರಿವೆ ಇಲ್ಲದಂತೆ ಬಿದ್ದು ಒರಳಾಡೊ ಕುಡುಕರು. ಹಗಲೊತ್ತು ಲೋಕ್ಲಾಸ್ ರಾತ್ರಿ ಹೈಕ್ಲಾಸ್ ಕುಡುಕರುಗಳ ಅಡ್ಡೆ. ಪುಡಾರಿ ಕುಡುಕರುಗಳಿಗೆ ಅನೈತಿಕ ಚಟುವಟಿಕೆಯ ತಾಣ, ನಿರ್ಗತಿಕರಿಗೆ ನಿರಾಶ್ರಿತರ ತಾಣ ಈ ಖಾಸಗಿ ಬಸ್ ನಿಲ್ದಾಣ.

ಇದು ಅಭಿವೃದ್ಧಿ ವಂಚಿತ ಯಾವುದೋ ಗಡಿ ಭಾಗದ ತಾಲ್ಲೂಕಿನಲ್ಲಿರುವ ಪಾಳುಬಿದ್ದ ಬಸ್ ನಿಲ್ದಾಣವಲ್ಲ. ಅಭಿವೃದ್ದಿಪಥದತ್ತ ಸಾಗುತ್ತ ಇತರ ತಾಲ್ಲೂಕುಗಳೊಂದಿಗೆ ಜಿಲ್ಲಾಕೇಂದ್ರವಾಗಲು ಪೈಪೊಟಿಗಿಳಿದಿರುವ ತಿಪಟೂರಿನ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣ. ಜಗಜ್ಯೋತಿ ಬಸವೇಶ್ವರ ಖಾಸಗಿ ಬಸ್ ನಿಲ್ದಾಣ ಪರೋಡಿಗಳು, ಕುಡುಕರು, ನಿರಾಶ್ರಿತರ ಅನೈತಿಕ ಚಟುವಟಿಕೆಯ ತಾಣ ಎಂದರೂ ಅತಿಶಯೋಕ್ತಿಯಲ್ಲ.

ಹೌದು ಅವ್ಯವಸ್ಥೆಯ ಆಗರವಾಗಿದ್ದ ಹಳೆ ಖಾಸಗಿ ಬಸ್ ನಿಲ್ದಾಣವನ್ನ ತೆರವುಗೊಳಿಸಿ ಅಮಾನಿಕೆರೆ ಜಾಗವನ್ನ ಒತ್ತುವರಿ ಮಾಡಿಕೊಂಡು ಹೊಸದಾಗಿ ಸುಸಜ್ಜಿತವಾದ ಖಾಸಗಿ ಬಸ್ ನಿಲ್ದಾಣವನ್ನ 2016 ರಲ್ಲಿ ನಿರ್ಮಾಣ ಮಾಡಲಾಯಿತು. ಈ ಖಾಸಗಿ ಬಸ್ ನಿಲ್ದಾಣಕ್ಕೆ ಜಗಜ್ಯೋತಿ ಶ್ರೀ ಬಸವೇಶ್ವರ ಖಾಸಗಿ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕದ ಕನಸು ಕಂಡ ಜಗಜ್ಯೋತಿ ಬಸಣ್ಣನವರ ಹೆಸರಿನಲ್ಲಿರುವ ಈ ನಿಲ್ದಾಣ ಕುಡುಕರು,ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಕೋವಿಡ್ 19 ನಿಂದ ಲಾಕ್ ಡೌನ್ ಆದ ಬಳಿಕ ಖಾಸಗಿ ಬಸ್ ಗಳ ಸಂಚಾರದಲ್ಲಿ ಇಳಿಮುಖವಾಗಿದೆ. ನೂರಾರು ಬಸ್ ಗಳ ಪೈಕಿ ಬೆರಳೆಣಿಕೆಯ ಬಸ್ ಗಳು ಮಾತ್ರ ಸಂಚರಿಸುತ್ತಿವೆ. ಇವು ಸಹ ನಿಲ್ದಾಣದಲ್ಲಿ‌ ನಿಲ್ಲದೆ ಈ ಹಳೆ ಖಾಸಗಿ ಬಸ್ ನಿಲ್ದಾಣ, ಕೆರೆ ಏರಿ ರಸ್ತೆಗಳಲ್ಲಿ ನೋ ಪಾರ್ಕಿಂಗ್ ನಿಯಮಗಳನ್ನ ಉಲ್ಲಂಘನೆ ಮಾಡುತ್ತಾ ಖಾಸಗಿ ಬಸಗ ಗಳನ್ನ ನಿಲ್ಲಿಸಿಕೊಳ್ಳುತ್ತಿದ್ದು ಯೂಟರ್ನ್ ಮಾಡಿಕೊಳ್ಳಲಷ್ಟೆ ಖಾಸಗಿ ಬಸ್ ನಿಲ್ದಾಣ ಬಳಕೆಮಾಡಿಕೊಳ್ತಿದ್ದಾರೆ. ಖಾಸಗಿ ಬಸ್ ನಿಲ್ದಾಣಕ್ಕೆ ಬಸ್ ಗಳು ಬರದೆ ಇರೊದ್ರಿಂದ ಪ್ರಯಾಣಿಕರು ಕೂಡ ಇತ್ತ ಸುಳಿಯುತ್ತಿಲ್ಲ…ಇದರಿಂದ ಲಕ್ಷಾಂತರ ರೂ ಸರ್ಕಾರದ ಅನುದಾನ ಬಳಕೆ ಮಾಡಿ ನಿರ್ಮಾಣ ಮಾಡಿರುವ ಖಾಸಗಿ ಬಸ್ ನಿಲ್ದಾಣ ಪ್ರಯಾಣಿಕರಿಗೆ ಉಪಯೋಗವಿಲ್ಲದೆ ಪಾಳುಬಿದ್ದಂತಾಗಿದೆ.

ಈಗ ನಿಲ್ದಾಣದಲ್ಲಿ ಎಲ್ಲಿ ನೋಡಿದ್ರು ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬೆಳಗಿನ ವೇಳೆ ಲೋಕ್ಲಾಸ್ ಕುಡುಕರು ಕಂಠಪೂರ್ತಿ ಕುಡಿದು ಹೊಟ್ಟೆಗಿಟ್ಟಿಲ್ಲದೆ ಬಂದು ಪ್ರಜ್ಞಾಹೀನ ರಾಗಿ ಲೋಕದ ಅರಿವೆ ಇಲ್ಲದಂತೆ ಬಸ್ ನಿಲ್ದಾಣದಲ್ಲಿ ಬಿದ್ದು ಒರಳಾಡುತ್ತಿರುತ್ತಾರೆ. ಇನ್ನೊಂದೆಡೆ ನಿರಾಶ್ರಿತರು, ಬಿಕ್ಷುಕರು, ಮಾನಸಿಕ ಅಸ್ವಸ್ಥರು ನಿಲ್ದಾಣವನ್ನೆ ಪುನರ್ವಸತಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಕುಡುಕರಂತೂ ನಿಲ್ದಾಣದ ಫ್ಲಾಟ್ ಫಾರಂ ನಲ್ಲೆ ಮಲಮೂತ್ರ ವಿಸರ್ಜನೆ ಮಾಡಿ ಗಬ್ಬೆದ್ದು ನಾರುವಂತೆ ಗಲೀಜು ಮಾಡಿದ್ದಾರೆ. ಖಾಸಗಿ ಬಸ್ ನಿಲ್ದಾಣದ ಈಗಿನ ದುಸ್ಥಿತಿಯನ್ನ ಅರಿಯದೆ ತಮ್ಮ ಮಾರ್ಗದ ಬಸ್ ಗಳನ್ನ‌ ಹುಡುಕಿಕೊಂಡು ಬರುವ ಪ್ರಯಾಣಿಕರನ್ನ ಸ್ಥಳೀಯರು ಈ ವಾತಾವರಣ ಸರಿಯಿಲ್ಲ ಸರ್ಕಾರಿ ಬಸ್ ನಿಲ್ದಾಣಕ್ಕೆ ಹೋಗಿ ಮತ್ತೆ ಈ ಕಡೆ ಬರಬೇಡಿ ಎಂದು ಕಳುಹಿಸುತ್ತಾರೆ.

ಇದು ಬೆಳಗಿನ ಕಥೆಯಾದ್ರೆ ಇನ್ನು ಸಂಜೆ 7 ಗಂಟೆಯಾದ್ರೆ ಸಾಕು ಮಹಿಳೆಯರು, ಮಕ್ಕಳು ಸುಸಂಸ್ಕೃತ ರು ಇತ್ತ ಅಡ್ಡಾಡುವಂತಿಲ್ಲ ಯಾಕಂದ್ರೆ ಪುಂಡಪೋಕರಿಗಳು ಬೈಕ್ ಕಾರುಗಳಲ್ಲಿ ಬಂದು ನಿಲ್ದಾಣದ ಓಪನ್ ಗ್ರೌಂಡಿನಲ್ಲಿ ಅಡ್ಡೆ ಹಾಕುತ್ತಾರೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಮದ್ಯಸೇವಿಸುತ್ತಾ ಶಿಳ್ಳೆ ಚಪ್ಪಾಳೆ ಹಾಕಿಕೊಂಡು ಕಿರುಚುತ್ತಿರುತ್ತಾರೆ. ಇವರ ವರ್ತನೆಗಳಿಂದ ಮಹಿಳೆಯರು ಹೆಣ್ಣು ಮಕ್ಕಳು ಸಂಜೆಯಾದ್ರೆ ಈ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ.

ಇಷ್ಟೆಲ್ಲಾ ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ರು ಈವರೆಗೂ ಯಾವೊಬ್ಬ ಅಧಿಕಾರಿಯೂ ಸಹ ಇತ್ತ ತಿರುಗಿ ನೋಡಿಲ್ಲ ಎನ್ನುತ್ತಾರೆ ನಿಲ್ದಾಣದಲ್ಲಿ ವಾಸವಿರುವ ನಿರಾಶ್ರಿತ ವೃದ್ದ. ಸದ್ಯ ಈ ನಿಲ್ದಾಣವನ್ನ ಈ ವೃದ್ದ ಪ್ರತಿದಿನ ಸ್ವಚ್ಚಗೊಳಿಸುತ್ತಿದ್ದಾರಂತೆ. ಕುಡುಕರು ಬಿಸಾಡಿದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕವರ್ ಗಳನ್ನ ಇವರೇ ಸ್ವಚ್ಚ ಮಾಡುತ್ತಿದ್ದಾರಂತೆ. ಕಳೆದ ಎರಡು ವರ್ಷದಿಂದ ಇಲ್ಲೆ ವಾಸವಿದ್ದೆನೆ ಯಾವ ಅಧಿಕಾರಿಗಳು ಇಲ್ಲಿಗೆ ಬರುವುದಿಲ್ಲ ಎನ್ನುತ್ತಾರೆ.

ಇನ್ನೂಈ ಖಾಸಗಿ ಬಸ್ ನಿಲ್ದಾಣದ ನಿರ್ವಹಣೆ ಜವಾಬ್ದಾರಿ ನಗರಸಭೆಗೆ ಸೇರಿದೆ. ಈಗಿದ್ರೂ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಲ್ಲಿನ ಅವ್ಯವಸ್ಥೆ ಕಾಣದೆ ಇರೊದು ನಿಜಕ್ಕೂ ದುರಂತ. ಅಥವಾ ಕಂಡರು ಕಾಣದಂತೆ ವರ್ತಿಸುತ್ತಿದ್ದಾರೋ ದೇವರೇ ಬಲ್ಲ. ಇಂತಹ ಅನೈತಿಕ ಚಟುವಟಿಕೆ ನಡೆಯುತ್ತಿದ್ದರು ಬೀಟ್ ಪೋಲೀಸರಾಗಲಿ, ಪೋಲೀಸ್ ಅಧಿಕಾರಿಗಳಾಗಲಿ ಇತ್ತ ಗಮನಹರಿಸುತ್ತಿಲ್ಲ, ಪೋಲೀಸರ ನಿರ್ಲಕ್ಷ್ಯ ದಿಂದ ಸಾರ್ವಜನಿಕ ಸ್ಥಳಗಳಲ್ಲಿ, ಲೇ ಔಟ್ ಗಳಲ್ಲಿ ಬಹಿರಂಗವಾಗಿಯೇ ಪುಂಡಪೋಕರಿಗಳು ಎಣ್ಣೆ ಪಾರ್ಟಿಗಳನ್ನ ಮಾಡಿಕೊಂಡು ಪುಂಡಾಟಿಕೆ ನಡೆಸಲು ಕಾರಣವಾಗಿದೆ.‌ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಬಂದು ಕ್ರಮಕೈಗೊಳ್ಳುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಹರಿಕಾರ ಜಗಜ್ಯೋತಿ ಬಸವೇಶ್ವರರ ಹೆಸರಿಗೆ ಅಪಮಾನವಾಗುತ್ತಿದ್ದು ಇನ್ನಾದ್ರೂ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆ ಹರಿಸಿ, ಇಲ್ಲಿ ವಾಸವಿರುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಂತಾಗಲಿ.

error: Content is protected !!