ತುರುವೇಕೆರೆ:ಕೊಲೆ ಪ್ರಕರಣವನ್ನು ಭೇಧಿಸಿದ ತುರುವೇಕೆರೆ ಪೊಲೀಸರಾದ:”ಸಿ.ಪಿ.ಐ.ನವೀನ್” ತಂಡ.

ತುರುವೇಕೆರೆ: ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ತುರುವೇಕೆರೆ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ದಿ.23-06-2021ರಂದು ತಾಲೂಕಿನ ಮಾಯಸಂದ್ರ ಹೋಬಳಿಯ ಜೋಡಕಟ್ಟೆ ಗ್ರಾಮದ ಸಂತೆ ಮೈದಾನದ ಸಮೀಪದಲ್ಲಿರುವ ಧನಂಜಯ ಎಂಬುವರಿಗೆ ಸೇರಿದ ಜಮೀನು ಮತ್ತು ಕಲ್ಲು ಗುಡ್ಡದಲ್ಲಿ ಡಿ.ಎನ್.ಪುರ ಕಾವಲು ವಾಸಿಯಾದ ಕುಮಾರ್ ಬಿನ್ ರಾಜಾಭೋವಿ ಎಂಬ ವ್ಯಕ್ತಿಯು ಅನುಮಾನಸ್ಪದವಾಗಿ ಮೃತಪಟ್ಟಿದ್ದು ಹಾಗೂ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯು ದಿನಾಂಕ 20-06-2021 ರಂದು ಮನೆಯಲ್ಲಿ ಗಾರೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿದ್ದಾನೆ. ಬಳಿಕ ಶವವಾಗಿ ಪತ್ತೆಯಾದ ನಂತರ ಮೃತನ ತಾಯಿ ಗೌರಮ್ಮ ತನ್ನ ಮಗನ ಸಾವಿನ ಬಗ್ಗೆ ಸೂಕ್ತ ತನಿಖೆ ಮತ್ತು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ ಮೇರೆಗೆ ಪಟ್ಟಣದ ಪಿ.ಎಸ್.ಐ ಪ್ರೀತಮ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ಮೃತದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು ಮತ್ತು ಆಸ್ಪತ್ರೆಯ ನುರಿತ ತಜ್ಞ ವೈದ್ಯರಿಂದ ಕೂಲಂಕುಶವಾಗಿ ದಿನಾಂಕ 24-06- 2021 ರಂದು ಶವ ಪರೀಕ್ಷೆಯನ್ನು ನಡೆಸಿ ಕೆಲವು ಸಾಕ್ಷಿದಾರರ ಹೇಳಿಕೆಯ ಆಧಾರದ ಮೇಲೆ ಹಾಗೂ ಮೃತನ ಸಾವು ಯಾವುದೋ ಆಯುಧದಿಂದ ಆಗಿರುವುದಾಗಿ ವಿವರ ವಿವರವಾದ ವರದಿಯನ್ನು ವೈದ್ಯರಿಂದ ಪಡೆದು ಪ್ರಕರಣವನ್ನು ದಾಖಲಿಸಿಕೊಂಡು ಮುಂದುವರೆದ ತನಿಖೆಗಾಗಿ ಪ್ರಕರಣವನ್ನು ತುರುವೇಕೆರೆ ಸಿ.ಪಿ.ಐ.ನವೀನ್ ರವರಿಗೆ ವರ್ಗಾವಣೆ ಮಾಡಿದ್ದರು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿ.ಪಿ.ಐ. ನವೀನ್ ರವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಶಹಾಪುರ ಅವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದೇಶ್, ಕುಣಿಗಲ್ ಉಪವಿಭಾಗದ ಉಪ ಅಧೀಕ್ಷಕ ರಮೇಶ್ ರವರ ಸಲಹೆ- ಸೂಚನೆಗಳ ಮೇರೆಗೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಸಿ.ಪಿ.ಐ.ನವೀನ್ ರವರು ಪ್ರತ್ಯೇಕ ತಂಡವನ್ನು ಗೌಪ್ಯವಾಗಿ ರಚಿಸಿ ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ಕೃತ್ಯ ನಡೆದ ಸ್ಥಳಕ್ಕೆ ಸಂಬಂಧಪಟ್ಟಂತೆ ತಾಂತ್ರಿಕ ಶಾಖೆಯಿಂದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಪತ್ತೆ ಕಾರ್ಯವನ್ನು ಬಹಳ ಚಾಣಾಕ್ಷತನದಿಂದ ಕೈಗೊಂಡು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಮಾಕಳಿಯ ಹತ್ತಿರ ಹೆಗ್ಗಡದೇವನಪುರದ ಆರೋಪಿ ಪುನೀತ @ ಪುನಿ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಯು ತನ್ನ ತಪ್ಪನ್ನು ತಾನೇ ಒಪ್ಪಿಕೊಂಡು, ಮೃತನು ಆರೋಪಿಗೆ ವೈಯಕ್ತಿಕವಾಗಿ ಬೈದು ಹಾಗೂ ಸಂಬಂಧಿಕರ ಮೇಲೆ ಕಳ್ಳತನ ಆರೋಪ ವರಿಸಿದ್ದ ಕಾರಣದಿಂದ ಮೃತನಿಗೆ ಮದ್ಯಪಾನ ಮಾಡಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.ಕೂಡಲೇ ಆರೋಪಿಯನ್ನು ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನ ನೀಡಲಾಗಿದೆ.

ಪ್ರಕರಣವನ್ನು ಬೇಧಿಸಲು ಶ್ರಮಿಸಿದ ಸಿ.ಪಿ.ಐ. ನವೀನ್ ಹಾಗೂ ಆರಕ್ಷಕ ಪೇದೆ ಸಿಬ್ಬಂದಿಗಳಾದ ರಮೇಶ್, ಸುಪ್ರೀತ್, ಮುತ್ತಣ್ಣ ಗುಡನ್ನಾಳ. ಜಯರಾಮ್. ಮಂಜುನಾಥ್. ತಾಂತ್ರಿಕ ಶಾಖೆಯ ನರಸಿಂಹರಾಜು ರವರುಗಳ ಬಗ್ಗೆ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಶಹಾಪುರವಾಡ್ ಅವರು ಶ್ಲಾಘಿಸಿದ್ದಾರೆ.

ವರದಿ- ಸಚಿನ್ ಮಾಯಸಂದ್ರ.

error: Content is protected !!