ಹಸುವಿನ ಹೊಟ್ಟೆಯಲ್ಲಿ ತಂತಿ ಪತ್ತೆ!

ತಿಪಟೂರು :ಹಸುವಿನ ಹೊಟ್ಟೆಯಲ್ಲಿ ಕಬ್ಬಿಣದ ತಂತಿ‌ಯ ತುಂಡು ಪತ್ತೆಯಾಗಿದ್ದು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.

ತಾಲೂಕಿನ ನೊಣವಿನಕೆರೆ ಗ್ರಾಮದ ನವೀನ್ ಎಂಬುವವರ ಸೀಮೆಹಸುವು ಹೊಟ್ಟೆ ಉಬ್ಬರದಿಂದ ನರಳುತ್ತಿತ್ತು. ಈ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ನೊಣವಿನಕೆರೆ ಪಶು ಆಸ್ಪತ್ರೆಯ ವೈದ್ಯ ಡಾ. ಎಸ್.ಪಿ. ಮಂಜುನಾಥ್ ಹಾಗೂ ಹುಣಸೇಘಟ್ಟದ ಡಾ. ಡಿ.ಎನ್. ಅಭಿಷೇಕ್‌ರವರು ಶಸ್ತ್ರಚಿಕಿತ್ಸೆ ಮಾಡಿ ಹಸುವಿನ ಹೊಟ್ಟೆಯಲ್ಲಿದ್ದ ತಂತಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ವೈದ್ಯ ಎಸ್.ಪಿ. ಮಂಜುನಾಥ್, ಹಸುಗಳಲ್ಲಿ ಹೊಟ್ಟೆಗೆ ನಾಲ್ಕು ಭಾಗಗಳಿದ್ದು ಚೂಪಾದ ವಸ್ತುಗಳು, ಪ್ಲಾಸ್ಟಿಕ್, ರೆಕ್ಸಿನ್‌ಗಳಂತಹ ವಸ್ತುಗಳನ್ನು ಹಸುವು ಮೇವಿನೊಂದಿಗೆ ತಿಂದಾಗ ಹಸುವಿನ ಹೊಟ್ಟೆಯ ಎರಡನೇ ಭಾಗದಲ್ಲಿ ಸಿಕ್ಕಿಕೊಳ್ಳುತ್ತವೆ. ಈ ಹಸುವಿನಲ್ಲಿ ಅದರ ಸಗಣಿಯ ಸಾಂದ್ರತೆ ಮತ್ತು ಹಸುವು ತೋರುತ್ತಿದ್ದ ಕೆಲವು ಲಕ್ಷಣಗಳಿಂದ ಚೂಪಾಗಿರುವ ವಸ್ತುವೊಂದು ಸಿಕ್ಕಿಕೊಂಡಿರುವುದನ್ನು ಪತ್ತೆ ಹಚ್ಚಲಾಯಿತು. ಅದರ ಮಾಲೀಕರು ಒಪ್ಪಿಗೆ ನೀಡಿದ್ದರಿಂದ ಹಸುವು ನಿಂತಿರುವ ಸ್ಥಿತಿಯಲ್ಲಿಯೇ ಅರವಳಿಕೆ ನೀಡಿ ಶಸ್ತ್ರ ಚಿಕಿತ್ಸೆ ನಡೆಸಿ ತಂತಿಯನ್ನು ಹೊರ ತೆಗೆಯಲು ಸಹಕಾರಿಯಾಯಿತು. ಈ ಮೊದಲು ತಮ್ಮ ತಂಡದಿಂದ ತುಮಕೂರು ಮತ್ತು ಹಾಸನ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಸುಮಾರು 60 ಜಾನುವಾರುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ತಂತಿ, ಸೂಜಿ, ಕಬ್ಬಿಣದ ಮೊಳೆ, ಚಮಚ ಮುಂತಾದ ಚೂಪಾದ ವಸ್ತುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಈ ಭಾಗದಲ್ಲಿ ಟೊಮೊಟೋ ಬೆಳೆಯುವ ರೈತರು ತುಂಬಾ ಹೆಚ್ಚಿನ ಸಂಖ್ಯೆಯಲ್ಲಿದ್ದು ತಂತಿಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ದನಕರುಗಳ ಮೇಯುವಾಗ ಎಚ್ಚರಿಕೆ ವಹಿಸಬೇಕು. ಕಬ್ಬಿಣದ ವಸ್ತುಗಳು ಹೊಟ್ಟೆಯನ್ನು ಸೇರಿಕೊಂಡಾಗ ಅನೇಕ ರೀತಿಯ ಗಂಭೀರ ಸ್ಥಿತಿಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಪಶುಪಾಲಕರು ಗಮನಹರಿಬೇಕೆಂದರು.
error: Content is protected !!