ಹೇಮಾವತಿ ನಾಲೆಗೆ ಹರಿಯುತ್ತಿದೆ ತಿಪಟೂರು ನಗರದ ಯುಜಿಡಿ ನೀರು: ತುಮಕೂರು ನಾಗರೀಕರೆ ಎಚ್ಚರ

ತಿಪಟೂರು: ನಗರದ‌ ಯುಜಿಡಿ ಕಲುಶಿತ ನೀರು ಹೇಮಾವತಿ ನಾಲೆಗೆ ಹರಿಯುತ್ತಿದ್ದು‌ ತುಮಕೂರು‌‌ ಜಿಲ್ಲೆಯ ಜನರ‌ ಜೀವನಾಡಿ ಹೇಮಾವತಿ‌ ನಾಲೆ‌ ನೀರು ಮಲೀನವಾಗ್ತಿದೆ.

ಹಾಸನ‌ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ವಿವಿಧ ಕೆರೆಗಳಿಗೆ ನಾಲೆ ಮೂಲಕ ಹರಿಯುತ್ತಿರುವ ನೀರು ತಿಪಟೂರು ತಾಲ್ಲೂಕಿನ‌ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಮಲೀನವಾಗ್ತಿದೆ . ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆ ತುಂಬಿ ಹರಿಯುವ ನೀರು ರಾಜಗಾಲುವೆ ಮೂಲಕ ಗೊರಗೊಂಡನಹಳ್ಳಿ, ಕೊಪ್ಪ, ಹುಲ್ಲುಕಟ್ಟೆ ಮಾರ್ಗವಾಗಿ ಹೇಮಾವತಿ ನಾಲೆ ಹಾದು ಈಚನೂರು ಕೆರೆ ಸೇರುತ್ತದೆ. ಈ ರಾಜಗಾಲುವೆಯಲ್ಲಿ ಹಲವು ವರ್ಷಗಳಿಂದ ತಿಪಟೂರು ನಗರದ ಯುಜಿಡಿ ಕೊಳಚೆ ನೀರು ಈಚನೂರು ಕೆರೆಗೆ ಬಂದು ಸೇರುತ್ತಿದೆ. ಇದೆ ಕೆರೆಯಿಂದ ಹಾಸನ ಜಿಲ್ಲೆಯ ಅರಸಿಕೆರೆ, ತಿಪಟೂರು ನಗರಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ತಿಪಟೂರು ನಗರದ ಜನರು ತಾವು ಬಳಸಿದ ಕಲುಶಿತ ನೀರನ್ನ ತಾವೇ ತಮಗರಿವಿಲ್ಲದಂತೆ ಕುಡಿಯುತ್ತಿದ್ದಾರೆ. ಇದೀಗ ಕಲುಶಿತ ನೀರು ನಾಲೆ ಸೇರುತ್ತಿದ್ದು ತುಮಕೂರು ಜನರು ಇದೇ ನೀರನ್ನ ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಹಲವು ಭಾರಿ‌ ಅಧಿಕಾರಿಗಳು, ಜನಪ್ರತಿನಿಧಿಗಳ ಗಮಕ್ಕೆ ತಂದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಸಿದ್ದು.

ತಿಪಟೂರು ನಗರದಲ್ಲಿ ಅವೈಜ್ಞಾನಿಕ ಒಳಚರಂಡಿ‌ ಕಾಮಗಾರಿಯಿಂದ ಕಲುಶಿತ ನೀರು ಶುದ್ದಿಕರಣ ಘಟಕಕ್ಕೆ ಸಮರ್ಪಕವಾಗಿ ನೀರು ಹರಿದು ಹೋಗುತ್ತಿಲ್ಲ ಇದರಿಂದ ಯುಜಿಡಿ, ಕೊಳಚೆ ನೀರು ರಾಜಗಾಲುವೆಯಲ್ಲಿ ಹರಿದುಹೋಗುತ್ತಿದೆ. ಹೇಮಾವತಿ ನಾಲೆಯ ಮೇಲೆ ಹಾದು ಹೋಗಿರುವ ರಾಜಗಾಲುವೆಯ ಸೇತುವೆ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಜಗಾಲುವೆ ನೀರು ಹರಿದು ಹೋಗಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸದೆ ಇರೊದ್ರಿಂದ ರಾಜಗಾಲುವೆಯಲ್ಲಿ ನಿತ್ಯ ಹರಿದು ಬರುತ್ತಿದ್ದ ತಿಪಟೂರು‌ ನಗರದ ಯುಜಿಡಿ ಕೊಳಚೆ ನೀರು ನೇರವಾಗಿ ಹೇಮಾವತಿ ನಾಲೆ ಸೇರಿ ಮಲೀನವಾಗುತ್ತಿದೆ. ತುಮಕೂರು ನಗರದ ಜನರು ಕುಡಿಯಲು ಇದೇ ನೀರನ್ನು ಅವಲಂಬಿಸಿದ್ದು ರೋಗ ರುಜಿನಗಳಿಗೆ ತುತ್ತಾಗುವ ಮುಂಚೆ ಜನರು ಕೂಡಲೆ ಹೆಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕೊರೋನಾ ಸಂಕಷ್ಟದಲ್ಲಿರುವ ಜನರು ರೋಗನಿರೋದಕ ಶಕ್ತಿ ಹೆಚ್ಚಿಸಿಕೊಳ್ಳಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಈ ಕಲುಶಿತ‌ ನೀರಿನಿಂದ ಹಲವಾರು ರೋಗಗಳಿಗೆ ತುತ್ತಾಗುವ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನ ಸರಿಪಡಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!