ಕಲ್ಪತರು ನಾಡಲ್ಲಿ ಜೀತಪದ್ದತಿ ಇನ್ನೂ ಜೀವಂತ.

ತಿಪಟೂರು: ಅಣ್ಣಾ ನಮನ್ನ ಇಲ್ಲಿಂದ ಹೆಂಗಾದ್ರೂ ಮಾಡಿ ಹೊರಗೆ ಕರೆದು ಕೊಂಡ್ ಹೋಗ್ರಿ….! ನಮಗೆ ಇಲ್ಲಿ ಸರಿಯಾದ ಊಟ ಇಲ್ಲಾ, ಮಾಡಿದ ಕೆಲಸಕ್ಕೆ ಕೂಲಿ ಇಲ್ಲಾ, ಹೊರಗೆ ಹೋದ್ರೆ ಹೊಡಿತಾರೆ..ನಮ್ಮ ಊರು ಕೇರಿ ಮರೆತೇ ಹೋಗಿದೆ. ಇದು ಕಳೆದ ಐದಾರು ವರ್ಷಗಳಿಂದ ಬಂಡೆಯಲ್ಲೆ ಬಲವಂತವಾಗಿ ಜೀವನ ಸವೆಸುತ್ತಿರುವ ಜೀತದಾಳುಗಳ ನೋವಿನ ಮಾತುಗಳು.

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಠಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಎಲ್ಲರೂ ನೋಡಿರ್ತಿರಾ…ಆ ಸಿನಿಮಾದಲ್ಲಿ ಕಾರ್ಮಿಕರನ್ನ ಬಲವಂತವಾಗಿ ಕರೆದುಕೊಂಡು ಹೋಗಿ ಕೆಜಿಎಫ್ ಚಿನ್ನದ ಗಣಿಯಲ್ಲಿ ಜೀತದಾಳುಗಳಾಗಿ ದುಡಿಸಿಕೊಳ್ಳುವುದು, ಕೆಲಸ ಮಾಡದೆ ಇದ್ರೆ ದೌರ್ಜನ್ಯ ಮಾಡೋದು, ಮಾಡಿದ ಕೆಲಸಕ್ಕೆ ಕೂಲಿ ಇಲ್ಲ, ಹೊಟ್ಟೆ ತುಂಬಾ ಊಟ ಇಲ್ಲಾ..ಶಕ್ತಿ ಇಲ್ಲಾ ಅಂದ್ರೆ ಕೊಂದೇ ಬಿಡ್ತಾರೆ.. ಇದೆಲ್ಲ ನಿಜವಾಗಲೂ ನಡೆದಿತ್ತಾ…ಎಂಬ ಬಗ್ಗೆ ಒಮ್ಮೆಯಾದ್ರು ಅನಿಸದೇ ಇರದು.

ಆದುನಿಕ ಜಗತ್ತಿನಲ್ಲಿಯೂ ಬಲಿಷ್ಠ ಕಾನೂನುಗಳ ನಡೆವೆಯೂ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಆದಿನಾಯಕನಹಳ್ಳಿ ಬಳಿ ಕಲ್ಲು (ಬಂಡೆ) ಗಣಿಗಳಲ್ಲಿ ತಮಿಳುನಾಡು ಹಾಗೂ ಕೋಲಾರ ಭಾಗದ ಜನರನ್ನ ಬಲವಂತವಾಗಿ ಕರೆತಂದು ಜೀತಕ್ಕೆ ದುಡಿಸಿಕೊಳ್ಳುತ್ತಿರುವುದು ಸ್ವಯಂ ಸೇವಾ ಸಂಘಟನೆಗಳಿಂದ ಬೆಳಕಿಗೆ ಬಂದಿದೆ.

ಕಲ್ಲು ಬಂಡೆಗಳಲ್ಲಿ ಕಾರ್ಮಿಕರನ್ನ ಬಲವಂತವಾಗಿ ಜೀತಕ್ಕೆ ದುಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನ ತಿಳಿದ ಸ್ವಯಂ ಸೇವಾ ಸಂಘಟನೆಗಳು ಸ್ಥಳಕ್ಕೆ ತೆರಳಿ ಜಿತದಾಳುಗಳಾಗಿದ್ದ ತಮಿಳುನಾಡು ಹಾಗೂ ಕೋಲಾರ ಮೂಲದ ಮೂಲದ ಕುಪ್ಪುಸ್ವಾಮಿ, ಗಣೇಶ, ಈಶ್ವರಮ್ಮ, ಅರ್ಜುನ್ ಸೇರಿದಂತೆ ಐದು ಜನರನ್ನ ರಕ್ಷಣೆ ಮಾಡಿದ್ದಾರೆ.

ಬಂಡೇ ಮಾಲಿಕ ಮಂಜುನಾಥ್ ಬಲವಂತವಾಗಿ ನಮ್ಮನ್ನು ಕರೆತಂದು ಬಂಡೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಜೀತದಾಳುಗಳು ಮಾಡಿದ ಕೆಲಸಕ್ಕೆ ಹಣವನ್ನೂ ನೀಡದೆ, ಸರಿಯಾದ ಊಟ ನೀಡದೆ, ಹೊರ ಹೋಗಲು ಬೀಡದೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬಂಡೆಯಿಂದ ಹೊರಬರುತ್ತಲೇ ಜೀತದಾಳುಗಳು ಬಂಡೆ ಮಾಲಿಕ ಮಂಜುನಾಥ್ ವಿರುದ್ದ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಂಡೆ ಮಾಲಿಕರಿಂದ ನಮ್ಮನ್ನು ರಕ್ಷಿಸಿ, ಕೂಲಿ ಹಣ ಕೊಡಿಸಿ ಗ್ರಾಮಕ್ಕೆ ಮರಳಿ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.

error: Content is protected !!