ಭಯೋತ್ಪಾದಕರ ಸಂಖ್ಯೆ 200 ಕ್ಕಿಂತ ಕಡಿಮೆ; ಕಳೆದ 30 ವರ್ಷಗಳಲ್ಲಿ ಇದೇ ಮೊದಲು

ಶ್ರೀನಗರ, ಡಿಸೆಂಬರ್ 30: ಜಮ್ಮು ಮತ್ತು ಕಾಶ್ಮೀರದಲ್ಲಿ, ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕರ ಸಂಖ್ಯೆ 200 ಕ್ಕಿಂತ ಕಡಿಮೆಯಿದ್ದು, ಕಳೆದ 30 ವರ್ಷಗಳಲ್ಲಿ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿರುವುದು ಇದೇ ಮೊದಲು ಎಂದು ಭದ್ರತಾ ಪಡೆಗಳು ಹೇಳಿದೆ.

ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಸ್ಥಳೀಯ ಭಯೋತ್ಪಾದಕರ ಸಂಖ್ಯೆ 86ರಷ್ಟಿದೆ. ಕಣಿವೆಯಲ್ಲಿ ಈ ವರ್ಷ 128 ಸ್ಥಳೀಯ ಹುಡುಗರು ಭಯೋತ್ಪಾದಕ ಗುಂಪು ಸೇರಿದ್ದಾರೆ. ಅವರಲ್ಲಿ 86 ಮಂದಿ ಇನ್ನೂ ಸಕ್ರಿಯರಾಗಿದ್ದಾರೆ. ಉಳಿದವರು ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ಬಂಧನಕ್ಕೊಳಗಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಯುಟಿಯಲ್ಲಿ ಇದೇ ಮೊದಲ ಬಾರಿಗೆ ಉಗ್ರರ ಸಂಖ್ಯೆ 200ಕ್ಕಿಂತ ಕಡಿಮೆಯಾಗಿದೆ. ಈ ವರ್ಷ ಸುಮಾರು 128 ಸ್ಥಳೀಯ ಯುವಕರು ಭಯೋತ್ಪಾದನೆಗೆ ಸೇರಿದ್ದಾರೆ. ಅವರಲ್ಲಿ 73 ಮಂದಿ ವಿವಿಧ ಎನ್‍ಕೌಂಟರ್‍ಗಳಲ್ಲಿ ಹತರಾಗಿದ್ದಾರೆ ಮತ್ತು 16 ಮಂದಿಯನ್ನು ಬಂಧಿಸಲಾಗಿದೆ. ಉಳಿದವರು ಇನ್ನೂ ಸಕ್ರಿಯರಾಗಿದ್ದಾರೆ ಎಂದು ಐಜಿ ವಿಜಯ್ ಕುಮಾರ್ ತಿಳಿಸಿದರು.

ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 5 ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ 11 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ನಿನ್ನೆ ಆರಂಭವಾದ ಎರಡು ಎನ್‍ಕೌಂಟರ್‍ಗಳಲ್ಲಿ 6 ಉಗ್ರರು ಹತರಾಗಿದ್ದರು. ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಸೇನಾ ಯೋಧ ಹುತಾತ್ಮರಾಗಿದ್ದು, ಇಬ್ಬರು ಸೇನಾ ಜವಾನರು ಮತ್ತು ಜಮ್ಮು ಕಾಶ್ಮೀರದ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಎರಡು ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ 6 ಭಯೋತ್ಪಾದಕರು ಕೊಲ್ಲಲ್ಪಟ್ಟರು. ಹತರಾದ ಭಯೋತ್ಪಾದಕರ ಪೈಕಿ 4 ಮಂದಿಯನ್ನು ಇಲ್ಲಿಯವರೆಗೆ 2 ಪಾಕಿಸ್ತಾನಿ ಮತ್ತು 2 ಸ್ಥಳೀಯ ಭಯೋತ್ಪಾದಕರು ಎಂದು ಗುರುತಿಸಲಾಗಿದೆ. ಇತರ 02 ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

”ಕಳೆದ ವರ್ಷ 180 ಮಂದಿಗೆ ಹೋಲಿಸಿದರೆ ಈ ವರ್ಷ ಕೇವಲ 128 ರಿಂದ 130 ಸ್ಥಳೀಯರು ಮಾತ್ರ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡಿದ್ದರಿಂದ ಸ್ಥಳೀಯ ಉಗ್ರರ ನೇಮಕಾತಿ ತೀವ್ರವಾಗಿ ಕಡಿಮೆಯಾಗಿದೆ. ಕದನ ವಿರಾಮ ಉಲ್ಲಂಘನೆಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಶ್ರೀನಗರ ಮೂಲದ 15 ಕಾಪ್ರ್ಸ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಜನರಲ್ ಆಫೀಸರ್ ಕಮಾಂಡಿಂಗ್ ಹೇಳಿದ್ದಾರೆ.

ಎನ್‍ಕೌಂಟರ್ ಸ್ಥಳಗಳಿಂದ ಭದ್ರತಾ ಪಡೆಗಳು ಒಂದು ಎಂ-4 ಕಾರ್ಬೈನ್, ಎಂಟು ಮ್ಯಾಗಜೀನ್‍ಗಳು, ಎರಡು ಎಕೆ 47 ರೈಫಲ್‍ಗಳು ಮತ್ತು ಇತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಭದ್ರತಾ ಏಜೆನ್ಸಿಗಳು ಇತ್ತೀಚಿನ ಕಾರ್ಯಾಚರಣೆಗಳನ್ನು ‘ದೊಡ್ಡ ಯಶಸ್ಸು’ ಎಂದು ಕರೆದಿವೆ.

error: Content is protected !!