ಹಾಸ್ಟೆಲ್ ವಿದ್ಯಾರ್ಥಿಗಳು ಕುಡಿಯುವ ನೀರಿನಲ್ಲಿ ವಿಷ ಹಾಕಲು ಪ್ರಯತ್ನಿಸಿದ್ದ ವ್ಯಕ್ತಿ ಜೈಲು ಪಾಲು

ಹುಳಿಯಾರು: ಹಾಸ್ಟೆಲ್ ವಿದ್ಯಾರ್ಥಿಗಳು ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ್ದ ವ್ಯಕ್ತಿಗೆ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತಿಪಟೂರಿನ ಘನ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಶಿವಕುಮಾರ ತೀರ್ಪು ನೀಡಿದ್ದಾರೆ.

ಶಿಕ್ಷಗೆ ಒಳಪಟ್ಟ ಆರೋಪಿ ಹುಳಿಯಾರು ಹೋಬಳಿಯ ಗುರುವಾಪುರದ ಶ್ರೀನಿವಾಸ್ ಆಗಿದ್ದಾನೆ. ಈತನು ಸುಮಾರು 1 ವರ್ಷದಿಂದ ಪ್ರತಿ ಶನಿವಾರ ಹೂವು ಕೀಳಲು ಗುರುವಾಪುರದ ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯ ಕಾಂಪೌಂಡ್ ಬಳಿ ಹೋಗುತ್ತಿದ್ದು, ಹಾಸ್ಟೆಲ್‌ನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡಿಕೊಂಡಿರುವ ಕರಿಯಮ್ಮ ರವರು ಹಾಸ್ಟೆಲ್ ಆವರಣದಲ್ಲಿರುವ ಹೂವನ್ನು ಕೀಳಬೇಡಿ ನೀವು ಕಿತ್ತರೆ ಬೇರೆಯವರು ಬಂದು ಹೂವನ್ನು ಕಿತ್ತುಕೊಂಡು ಹೋಗುತ್ತಾರೆ ಬರಬೇಡಿ ಎಂತ ಹೇಳಿ ಕಳುಹಿಸಿದ್ದಾರೆ.

ಇದರಿಂದ ಕರಿಯಮ್ಮ ರವರ ಮೇಲೆ ದ್ವೇಷ ಸಾಧಿಸಲು ಮುಂದಾದ ಶ್ರೀನಿವಾಸ ಹಾಸ್ಟಲ್‌ನ ಕುಡಿಯುವ ಫಿಲ್ಟರ್ ನೀರಿಗೆ ವಿಷ ಹಾಕಿದರೆ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ತೊಂದರೆಯಾಗಿ ಕರಿಯಮ್ಮ ರವರನ್ನು ಕೆಲಸದಿಂದ ತೆಗೆದು ಹಾಕಬಹುದೆಂಬ ಉದ್ದೇಶದಿಂದ 2018 ರ ಜನವರಿ 17 ರಂದು ಸಂಜೆ 5 ಗಂಟೆಗೆ ಟಿ.ದರ್ಶನ ಎಂಬುವವನನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಹುಳಿಯಾರು ಪಿಎಸ್‌ಐ ಕೆ.ಸಿ.ವಿಜಯಕುಮಾರ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು. ತನಿಖೆಯಲ್ಲಿ ವಿಷದ ಬಾಟಲ್‌ನ್ನು ಬಾಲಕನಿಗೆ ನೀಡಿರುವುದು ದೃಢಪಟ್ಟಿದ್ದರಿಂದ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ತಿಪಟೂರಿನ ಘನ ೫ನೇ, ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಶಿವಕುಮಾರ ಅವರು ವಿಚಾರಣೆ ನಡೆಸಿ ಆರೋಪಿಯು ಮಾಡಿರುವ ಅಪರಾಧವು ದೃಢಪಟ್ಟಿದೆ ಎಂದು ತೀರ್ಮಾನಿಸಿ, 2021 ರ ಡಿಸೆಂಬರ್ 20 ರಂದು ಆರೋಪಿಯು ಕಲಂ 307 ಐಪಿಸಿ ಅಡಿಯಲ್ಲಿ ಎಸಗಿರುವ ಅಪರಾಧಕ್ಕಾಗಿ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ಹಾಗು ದಂಡ ಕಟ್ಟಲು ತಪ್ಪಿದಲ್ಲಿ 1 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಪ್ರಭಾರ ಸರ್ಕಾರಿ ಅಭಿಯೋಜಕರಾದ ಹನುಂತರಾಯ ತಳಕೇರಿ ಮತ್ತು ಮಹಾದೇವ ಈರಪ್ಪ ಗಡದ ಇವರು ಪ್ರಕರಣವನ್ನು ನಡೆಸಿ, ವಾದ ಮಂಡಿಸಿದ್ದರು.

error: Content is protected !!