ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಕೇಳಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧ ವಿಲೇವಾರಿ ಮಾಡಿರುವ ಅಥವಾ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ರಿಜಿಸ್ಟ್ರಾರ್ ಜನರಲ್ ಅವರು ವಿಶೇಷ ಸೆಷನ್ಸ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಪಡೆಯಬೇಕು ಎಂದು ಬುಧವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಆರಂಭಿಸಬೇಕು ಮತ್ತು ಅವುಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣವು ನವೆಂಬರ್ 24ರಂದು ವಿಚಾರಣೆಗೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜನವರಿ 17ಕ್ಕೆ ವಿಚಾರಣೆಗೆ ನಿಗದಿಪಡಿಸುವಂತೆ ಪೀಠವು ಆದೇಶದಲ್ಲಿ ಹೇಳಿದೆ.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಆದಿತ್ಯ ಸೋಂಧಿ ಅವರು, ಆಗಸ್ಟ್ 26ರಂದು ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಪ್ರಾಸಿಕ್ಯೂಷನ್ ಹಿಂಪಡೆದಿರುವ ಕುರಿತು ದಾಖಲೆಯಲ್ಲಿ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಫಿಡವಿಟ್ಗೆ ಪ್ರತಿಕ್ರಿಯೆ ಸಲ್ಲಿಸಲು ಪೀಠವು ಆದೇಶಿಸಿತ್ತು ಎಂದರು.

ಆಗ ಪೀಠವು ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲಾಗಿದೆ ಎಂದಿತು. ಇದಕ್ಕೆ ಸೋಂಧಿ ಅವರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ 16ರ ಬಳಿಕ ಬಾಕಿ ಇರುವ ಅಥವಾ ವಿಲೇವಾರಿ ಮಾಡಲಾದ ಪ್ರಕರಣಗಳ ಪಟ್ಟಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ವಿಶೇಷ ನ್ಯಾಯಾಲಯಗಳಿಂದ ಪಡೆದುಕೊಳ್ಳಬೇಕು ಎಂಬುದು ಸುಪ್ರೀಂ ಕೋರ್ಟ್ ನಿರ್ದೇಶನವಾಗಿದೆ ಎಂದರು.

ಪ್ರಕರಣಗಳ ವಿಚಾರಣೆ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಪಟ್ಟ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಇದ್ದು, ಈ ಕುರಿತು ನವೆಂಬರ್ 24ರಂದು ಸರ್ವೋಚ್ಚ ನ್ಯಾಯಾಲಯ ಪರಿಗಣಿಸಲಿದೆ. ಈ ವಿಚಾರದ ಕುರಿತು ಸುಪ್ರೀಂ ಕೋರ್ಟ್ ನಿರ್ಧಾರಕ್ಕಾಗಿ ನಾವು ಕಾಯಬೇಕಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!