ತುಮಕೂರು: ಮಹಜರ್ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿ ಬಂದಿಸಿರುವ ಘಟನೆ ತುಮಕೂರು ನಗರದ ದಿಬ್ಬೂರು ಬಳಿ ನಡೆದಿದೆ.
ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರದ ಪುಟ್ಟಪರ್ತಿ ಮೂಲದ ಮನೋಜ್ ಅಲಿಯಾಸ್ ಮನು ಎಂಬಾತನನ್ನ ಇಂದು ಬೆಳಗ್ಗೆ ಬಂದಿಸಿದ್ದರು. ಸಂಜೆ ನಗರ ಠಾಣೆ ಸಿಪಿಐ ದಿನೇಶ್ ಕುಮಾರ್ ಆರೋಪಿ ಮನೋಜ್ ನ್ನ ಸ್ಥಳ ಮಹಜರಿಗೆ ಕರೆದೊಯ್ದಿದ್ದರು, ಈ ವೇಳೆ ಆರೋಪಿ ಮನೋಜ್ ಡ್ರ್ಯಾಗರ್ ನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಸಿಪಿಐ ದಿನೇಶ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದಾನೆ, ಈ ವೇಳೆ ಆತನ ಕಾಲಿಗೆ ಗುಂಡು ಹೊಡೆದು ಬಂದಿಸಿದ್ದಾರೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಚೇತನ್ ಎಂಬುವರ ಎಡಗೈಗೆ ಗಾಯವಾಗಿದೆ. ಗಾಯಾಳು ಸಿಬ್ಬಂದಿ ಚೇತನ್ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಹಾಗೂ ಆರೋಪಿ ಮನೋಜ್ ಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮನೋಜ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೆವೆ ಎಂದು ಎಸ್ಪಿ ಅಶೋಕ್ ಕೆವಿ ತಿಳಿಸಿದ್ದಾರೆ.