ನೆಲಮಂಗಲ: ಭೀಕರ ಸರಣಿ ಅಪಘಾತದಲ್ಲಿ 6 ಮಂದಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.
ಮೃತರನ್ನು ಚಂದ್ರಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಅಂತಾ ಗುರುತಿಸಲಾಗಿದೆ.
ತುಮಕೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವಿನ ನಡೆದ ಅಪಘಾತದಲ್ಲಿ ಕಾರಿನ ಮೇಲೆ ಲಾರಿ ಕಂಟೇನರ್ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಎರಡು ಹೆಣ್ಣು ಮಕ್ಕಳು, ಒಬ್ಬ ಯುವಕ, ಮತ್ತೊರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಅಪಘಾತ ನಡೆದ ಕೂಡಲೇ ಸಾರ್ವಜನಿಕರು ಕಂಟೇನರ್ ತೆರವು ಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟರಾದರೂ ಸಾಧ್ಯವಾಗಿಲ್ಲ. ಬಳಿಕ ಮೂರು ಕ್ರೇನ್ ಗಳ ಸಹಾಯದಿಂದ ಕಾರಿನ ಮೇಲೆ ಬಿದ್ದಿದ್ದ ಕಂಟೇನರ್ ಲಾರಿಯನ್ನ ಮೆಲಕ್ಕೆ ಎತ್ತಲಾಯಿತು. ಭಾರಿ ಗಾತ್ರದ ಲಾರಿ ಕಂಟೇನರ್ ಕೆಳಗೆ ಸಿಲುಕಿದ್ದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದವರೆಲ್ಲರೂ ಸ್ಥಳದಲ್ಲೆ ಮೃತಪಟ್ಟಿದ್ದರು.
ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ರಸ್ತಡಯಲ್ಲಿ ಉರುಳಿ ಬಿದ್ದಿದ್ದ ಲಾರಿಗಳನ್ನ ತೆರವುಗೊಳಿಸಲಾಯಿತು. ಇದರಿಂದ ವಿಕೇಂಡ್ ರಜೆಗಾಗಿ ಊರುಗಳಿಗೆ ತೆರಳುತ್ತಿದ್ದ ವಾಹನ ಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹೈರಾಣದಾರು. ನೆಲಮಂಗಲ- ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.