ಡಿ.31 ರ ಕರ್ನಾಟಕ ಬಂದ್‌ಗೆ ದಲಿತ ಸಂಘಟನೆಗಳ ಬೆಂಬಲ

ತುಮಕೂರು: ಕನ್ನಡಪರ ಸಂಘಟನೆಗಳು ಡಿ 31 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಿವಿಧ ದಲಿತ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೇನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿವೆ.

ಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ರಾಜ್ಯದಲ್ಲಿ ನಾಡು, ನುಡಿ, ಜಲ ಭಾಷೆಯ ಬಗ್ಗೆ ನಾಡಿನ ಎಲ್ಲಾ ಸಂಘಟನೆಗಳು, ಹೋರಾಟಗಾರರು, ನಾಗರೀಕರು, ರಾಜಕೀಯ ಮುಖಂಡರು ಬೆಂಬಲಿಸಬೇಕು ಅದೇ ರೀತಿ ಡಿ.31ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎಲ್ಲಾ ದಲಿತ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.

ನಾಡು ನುಡಿ ಜಲ ಭೂಮಿ ಮರಗಿಡಗಳಿಗೆ ಜಾತಿ ತಾರತಮ್ಯವಿಲ್ಲ, ಆದರೆ ಮನುಷ್ಯರಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ತಾಂಡವಾಡುತ್ತಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡಿವಾಣ ಹಾಕಬೇಕು, ಅಸ್ಪೃಶ್ಯ ಆಚರಣೆ ಮಾಡುವ ಜನಾಂಗಕ್ಕೆ ತಕ್ಷಣ ಗಡಿಪಾರು ಮಾಡುವಂತಹ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಎಲ್ಲಾ ಜನಾಂಗಕ್ಕೆ ಶವಸಂಸ್ಕಾರ ಮಾಡಲು ಸ್ಮಶಾನಗಳನ್ನು ಮಂಜೂರು ಮಾಡಬೇಕು, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳು ಧ್ವಂಸ ಮಾಡುತ್ತಿದ್ದು, ಫ್ಲೆಕ್ಸ್, ಬ್ಯಾನರ್, ನಾಮಫಲಕಗಳಿಗೆ ಅವಮಾನ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗುವಂತಹ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ವಿಧಾನಸೌಧ ಮುಂಭಾಗದಲ್ಲಿ ಸಂಗೊಳ್ಳಿರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ನಿಲ್ಲಿಸಲು ತೀರ್ಮಾನಿಸಿದೆ. ಜೊತೆಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನೂ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.

ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೇನೆ ರಾಜ್ಯಾಧ್ಯಕ್ಷ ನಗುತ ರಂಗನಾಥ್ ಮಾತನಾಡಿ, ರಾಜ್ಯದಲ್ಲಿ ಮುಚ್ಚಿರುವಂತಹ ಸರ್ಕಾರಿ ಶಾಲೆಗಳನ್ನು ಪುನರ್ ಆರಂಭಿಸಿ, ಉನ್ನತೀಕರಣ ಮಾಡಬೇಕು, ಬುದ್ಧ, ಬಸವ, ಅಂಬೇಡ್ಕರ್ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ದೇಶದ ಮತ್ತು ನಾಡಿನ ಹಿತರಕ್ಷಣೆಗಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಶಿವಾಜಿ ಮಹಾರಾಜ್‌ಗೆ ಅವಮಾನ ಮಾಡಲಾಗಿದೆ, ಈ ಘಟನೆಯನ್ನು ಖಂಡಿಸಲಾಗುತ್ತದೆ ಎಂದರು.

ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ.31ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೇನೆ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಹೆಚ್.ಬಿ.ರಾಜೇಶ್, ಜಿಲ್ಲಾ ಉಪಾಧ್ಯಕ್ಷ ಸಿದ್ಧಲಿಂಗಯ್ಯ ಜಿ.ಸಿ., ನಗರಾಧ್ಯಕ್ಷ ಟಿ.ಮನು, ವಿದ್ಯಾರ್ಥಿ ಘಟಕದ ಎನ್.ಶ್ರೀನಿವಾಸ್, ದಸಂಸ ನಗರ ಗೌರವಾಧ್ಯಕ್ಷ ಜಿ.ಆರ್.ಗಂಗಾಧರ್, ನಗರಾಧ್ಯಕ್ಷ ಲಕ್ಷ್ಮೀನಾರಾಯಣ್, ಎಡಬಲ ಸಮುದಾಯಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎ.ಡಿ.ನರಸಿಂಹರಾಜು ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

error: Content is protected !!