ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ನೌಕರರ ಮುಷ್ಕರ

ತುಮಕೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಮುಷ್ಕರ ಆರಂಭಿಸಿದ್ದಾರೆ.

ದೇಶಾದ್ಯಂತ ಇಂದು ಮತ್ತು ನಾಳೆ ನಡೆಸಲಾಗುತ್ತಿರುವ ಬ್ಯಾಂಕ್‌ಗಳ ಮುಷ್ಕರ ಬೆಂಬಲಿಸಿ ತುಮಕೂರು ನಗರದ ಚರ್ಚ್ ಸರ್ಕಲ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿರುವ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ, ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುಧಾರಣೆಯ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಘೋಷಿಸಿದೆ. ಐಡಿಬಿಐ ಬ್ಯಾಂಕ್ ಮತ್ತು ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ, ಆಸ್ತಿ ವಸೂಲಿ ಕಂಪೆನಿಯ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ಒಂದು ಸಾಮಾನ್ಯ ವಿಮಾ ಕಂಪೆನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ. ೭೪ ರವರೆಗೆ ಅವಕಾಶ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತದಲ್ಲಿ ಹುರುಪು ಹಾಗೂ ಅವುಗಳ ಮಾರಾಟ ಇವೆಲ್ಲವೂ ಪ್ರತಿಗಾಮಿ ಕ್ರಮಗಳಾಗಿರುವುದರಿಂದ ಅವುಗಳನ್ನು ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಮುಷ್ಕರ ನಿರತ ಬ್ಯಾಂಕ್ ನೌಕರರು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯದ ಲೂಟಿಗೆ ಅವಕಾಶ ನೀಡಿದಂತಾಗುತ್ತದೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಉದ್ಯೋಗಾವಕಾಶಹಳು ಹಾಗೂ ಮೀಸಲಾತಿಯಂತಹ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುವುದರ ಜತೆಗೆ ಶಾಖೆಗಳ ಮುಚ್ಚುವಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಮಾಡುವ ಕ್ರಮ ಸರಿಯಲ್ಲ. ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

1969 ರಲ್ಲಿ 14 ಮತ್ತು 1980 ರಲ್ಲಿ 6 ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಲಾಗಿತ್ತು. ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ ಬ್ಯಾಂಕ್‌ಗಳ ಮುಳುಗುವಿಕೆ ಸರ್ವೆ ಸಾಮಾನ್ಯವಾಗಿತ್ತು. 1947 ರಿಂದ 1969 ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕ್‌ಗಳು ಮುಳುಗಿದವು. ಈ ಬ್ಯಾಂಕ್‌ಗಳ ಠೇವಣಿದಾರರು ತಮ್ಮ ಉಳಿತಾಯವನ್ನು ಕಳೆದುಕೊಂಡರು ಎಂದು ಮುಷ್ಕರ ನಿರತರು ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಯುಎಫ್‌ಬಿಯುನ ಸಂಚಾಲಕ ವಾದಿರಾಜ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಬ್ಯಾಂಕ್ ನೌಕರರು ಇಂದು ಮತ್ತು ನಾಳೆ ಮುಷ್ಕರ ನಡೆಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ದೇಶದ ಆರ್ಥಿಕ ಪ್ರಗತಿಯೂ ಆಗಿದೆ ಎಂದರು.

ದೇಶದಲ್ಲಿ ಇದುವರೆಗೂ 550 ಕ್ಕೂ ಹೆಚ್ಚು ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿವೆ. ಆದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿಯಾಗಿರುವ ನಿದರ್ಶನಗಳಿಲ್ಲ. 2009-10 ರಲ್ಲಿ 77 ಸಾವಿರ ಕೋಟಿ ಲಾಭ ಮತ್ತು 2019-20ರಲ್ಲಿ 1 ಲಕ್ಷ 22 ಕೋಟಿ ರೂ. ಲಾಭ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಂದಿದೆ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭದಲ್ಲಿವೆ ಎಂಬುದನ್ನು ಸೂಚಿಸುತ್ತದೆ ಎಂದರು.

ಗ್ರಾಹಕರಿಗೆ 2 ದಿನ ಮಾತ್ರ ತಾತ್ಕಾಲಿಕವಾಗಿ ತೊಂದರೆಯಾಗಬಹುದು. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಖಾಸಗೀಕರಣವಾದರೆ ವರ್ಷಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಮ್ಮ ಹೋರಾಟಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದುವರೆಗೂ ಕೇಂದ್ರ ಸರ್ಕಾದ ಎಲ್ಲ ಸ್ಕೀಂಗಳನ್ನು ಕಾರ್ಯಗತಗೊಳಿಸಿರುವುದು ರಾಷ್ಟ್ರೀಕೃತ ಬ್ಯಾಂಕ್‌ಗಳು. ಯಾವುದೇ ಖಾಸಗಿ ಬ್ಯಾಂಕ್‌ಗಳಲ್ಲ ಎಂದು ಅವರು ಹೇಳಿದರು.

ಎಸ್‌ಬಿಐ ನಟರಾಜು ಮಾತನಾಡಿ, 1969ರಲ್ಲಿ 16 ಬ್ಯಾಂಕ್‌ಗಳು, 1980 ರಲ್ಲಿ 6 ಬ್ಯಾಂಕ್‌ಗಳನ್ನು ರಾಷ್ಟ್ರೀಕೃತ ಮಾಡಲಾಗಿದ್ದು, ಅಂದಿನಿಂದ ಇಂದಿನವರೆಗೆ ಯಾವುದೇ ಗ್ರಾಹಕರಿಗೆ ನಷ್ಟವಾಗಿಲ್ಲ. ಇದೀಗ ಖಾಸಗೀಕರಣ ಮಾಡುವುದಾಗಿ ಹೇಳುತ್ತಿರುವುದು ವಿಷಾದನೀಯ. ಖಾಸಗೀಕರಣದ ಮೂಲಕ ದೇಶದ ಜನರ ಉಳಿತಾಯ, ಲೂಟಿಗೆ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದರು.

ಮುಷ್ಕರದಲ್ಲಿ ಯುಎಫ್‌ಬಿಯುನ ಸಂಚಾಲಕ ವಾದಿರಾಜ್, ವಿವಿಧ ಬ್ಯಾಂಕ್ ನೌಕರರಾದ ನಟರಾಜು, ಸರ್ವಮಂಗಳ, ಮಹೇಶ್ವರಪ್ಪ, ಶಂಕರಪ್ಪ, ರಾಮಕೃಷ್ಣೇಗೌಡ, ವೆಂಕಟೇಶಮೂರ್ತಿ, ರಾಮಕೃಷ್ಣ, ಜಾನಕೀರಾಂಬಾಬು, ವೆಂಕಟೇಶ್, ನಾರಾಯಣ, ಮಹಲಿಂಗಯ್ಯ, ರಮೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

error: Content is protected !!