ತುಮಕೂರು: ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾರಣಗಳಿಲ್ಲದೆ ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು 1ಕ್ಕಿಂತ ಹೆಚ್ಚು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲುಗಳ ಸ್ವೀಕಾರ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಲೋಕಾಯುಕ್ತದಲ್ಲಿ ಪ್ರಸ್ತುತ 20,000 ದೂರು ಅರ್ಜಿಗಳು ಬಾಕಿ ಉಳಿದಿವೆ. ಈ ಪೈಕಿ ಶೇ.50ರಷ್ಟು ದೂರು ಅರ್ಜಿಗಳು ಸುಳ್ಳುಗಳಿಂದ ಕೂಡಿವೆ. ಇದರಿಂದ ಲೋಕಾಯುಕ್ತದ ಸಮಯ ವ್ಯರ್ಥವಾಗುತ್ತಿದೆಯಲ್ಲದೆ ನೈಜ ದೂರು ಪ್ರಕರಣಗಳ ವಿಲೇವಾರಿಗೂ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನವನಾದ ನಾನು ನಮ್ಮ ಜಿಲ್ಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಶೇ.80ರಷ್ಟು ವಿದ್ಯಾವಂತರಲ್ಲಿ ಕಾನೂನು ಅರಿವಿನ ಕೊರತೆ
ವಿಶ್ವದಲ್ಲೇ ಅತ್ಯಂತ ಬಲಿಷ್ಠ ಪ್ರಜಾ ಪ್ರಭುತ್ವ ಹೊಂದಿರುವ ದೇಶದಲ್ಲಿ ಶೇ.80ರಷ್ಟು ವಿದ್ಯಾವಂತರಲ್ಲಿ ಕಾನೂನು ಅರಿವಿನ ಕೊರತೆಯಿದೆ. ವಿದ್ಯಾವಂತ ಮೋಸಗಾರರಿಂದ ಸರ್ಕಾರಿ ವ್ಯವಸ್ಥೆ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಲೋಕಾಯುಕ್ತ ಸಂಸ್ಥೆಯು ಸರ್ಕಾರಿ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕಂಡು ಬರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ಅಧಿಕಾರಿಗಳಲ್ಲಿರುವ ವಿಳಂಬ ಧೋರಣೆಯನ್ನು ತಡೆಗಟ್ಟುವ ಉದ್ದೇಶದಿಂದ 1984ರಲ್ಲಿ ಸ್ಥಾಪನೆಗೊಂಡ ಸ್ವತಂತ್ರ ಸಂಸ್ಥೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಸಾರ್ವಜನಿಕರು ಹಾಗೂ ಅಧಿಕಾರಿಗಳ ಮನಸ್ಥಿತಿ ಬದಲಾದಾಗ ಮಾತ್ರ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ಹೊಡೆದೋಡಿಸಲು ಸಾಧ್ಯ ಎಂದು ತಿಳಿಸಿದರು.
ಭ್ರಷ್ಟಾಚಾರವು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಕ್ಯಾನ್ಸರ್ ರೋಗವನ್ನಾದರೂ ಗುಣಪಡಿಸಬಹುದು. ಆದರೆ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕ ಸೇವೆಯನ್ನು ಒದಗಿಸಬೇಕೇ ಹೊರತು ಹಣಕ್ಕಾಗಿ ಕೈಚಾಚಬಾರದು. ನಮ್ಮ ಅಸ್ತಿತ್ವವನ್ನು ನಾವು ಯಾರಿಗೂ ಮಾರಿಕೊಳ್ಳಬಾರದು. ನಾರದ ಮುನಿಗಳ ಉಪದೇಶದಿಂದ ರತ್ನಾಕರನು ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಯಾದಂತೆ ಭ್ರಷ್ಟ ಅಧಿಕಾರಿ/ಸಿಬ್ಬಂದಿಗಳು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಲೋಕಾಯುಕ್ತ ಅಪರ ನಿಬಂಧಕ ಜೆ.ವಿ.ವಿಜಯಾನಂದ, ಉಪ ನಿಬಂಧಕರಾದ ಬಸವರಾಜಪ್ಪ ಕೆ.ಎಂ., ಅರವಿಂದ ಎನ್.ವಿ., ತುಮಕೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ವಿ. ಲಕ್ಷ್ಮಿನಾರಾಯಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಮತ್ತು ಜಿಲ್ಲೆಯ ವಿವಿಧ ಅಧಿಕಾರಿಗಳು, ದೂರುದಾರರು, ಸಾರ್ವಜನಿಕರು ಉಪಸ್ಥಿತರಿದ್ದರು