ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ

ತುಮಕೂರು : ಕೋವಿಡ್ ಎರಡನೇ ಅಲೆ ಆರಂಭವಾಗುತ್ತಿರುವ ಹಿನ್ನೇಲೆಯಲ್ಲಿ ಜಿಲ್ಲೆಯಲ್ಲಿ ಮದುವೆ, ಸಾಮಾಜಿಕ ಆಚರಣೆ/ಸಮಾರಂಭ, ಧಾರ್ಮಿಕ ಆಚರಣೆಗಳು, ಜನ್ಮದಿನ ಹಾಗೂ ಇತರೆ ಆಚರಣೆ, ಜಾತ್ರೆ ಕ್ರೀಡೆ, ರಾಜಕೀಯ ಆಚರಣೆಗಳು/ಸಮಾರಂಭ ಮತ್ತಿತರ ಕಾರ್ಯಕ್ರಮಗಳಿಗೆ ಸರ್ಕಾರ ನೀಡಿರುವ ಕೋವಿಡ್ ಮಾರ್ಗಸೂಚಿಗಳನ್ನು  ಉಲ್ಲಂಘಿಸಿದರೆ ಕಾರ್ಯಕ್ರಮ ಆಯೋಜಕರ  ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಂಜೆ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆ/ ಸಮಾರಂಭ, ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು. ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸ್ ಮಾಡಬೇಕು. ಒಂದು ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜ್ವರ, ನೆಗಡಿ, ಉಸಿರಾಟ ತೊಂದರೆ ಸೇರಿದಂತೆ ಕೋವಿಡ್ ಲಕ್ಷಣವಿರುವರು ಖಾಸಗಿ ಕ್ಲಿನಿಕ್‌ಗಳಿಗೆ ಬಂದರೆ  ವೈದ್ಯರು  ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಹಾಗೂ ಇದನ್ನು ವೈದ್ಯರ ಚೀಟಿ ( ಪ್ರಿಸ್ಕ್ರೀಪ್ಸನ್)   ಮೇಲೆ ನಮೂದಿಸಬೇಕು. ಈ ಬಗ್ಗೆ  ಆರೋಗ್ಯ ಇಲಾಖೆ ಹಾಗೂ  ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡಬೇಕೆಂದು ಅವರು ತಿಳಿಸಿದರು.

ಜ್ವರ, ನೆಗಡಿ, ಉಸಿರಾಟ ತೊಂದರೆ ಇದ್ದರೆ ಜನರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರ್.ಟಿ.ಪಿ.ಸಿ.ಆರ್ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಔಷಧಿ ಅಂಗಡಿಗಳು ಜ್ವರ, ನೆಗಡಿ, ಉಸಿರಾಟದ ತೊಂದರೆ ಇರುವವರಿಗೆ ವೈದ್ಯರ ಚೀಟಿ ಇಲ್ಲದೇ ನೇರವಾಗಿ ಔಷಧಿಯನ್ನು ಮಾರಾಟ ಮಾಡುವಂತಿಲ್ಲವೆಂದು ಅವರು ಹೇಳಿದರು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಿ ಎಂದರು.

ಕೇರಳ, ಮಹಾರಾಷ್ಟ್ರ,  ಪಂಜಾಬ್, ಚಂಢೀಗಡ ರಾಜ್ಯದಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಬೇಕು.  ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದು ತರಬೇಕು. ರೈಲ್ವೆ ಸ್ಟೇಷನ್, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತುಮಕೂರು ಜಿಲ್ಲೆಗೆ ಬೆಳಗಾವಿ ಮತ್ತು ಮಂಗಳೂರು ನಿಂದ ಬಸ್ಸಿನಲ್ಲಿ ಬರುವವರ ಮೇಲೂ ನಿಗಾವಹಿಸಿ ಕೋವಿಡ್ ಲಕ್ಷಣ ಇಲ್ಲದಿರುವ ಬಗ್ಗೆ ಬಸ್ಸಿನ ಸಿಬ್ಬಂದಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು. 

 ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಉಪವಿಭಾಗಧಿಕಾರಿ ಅಜಯ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್, ಡಿಹೆಚ್‌ಒ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು  ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!