ತುಮಕೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ 713 ಜನ ಅಧಿಕಾರಿ/ಸಿಬ್ಬಂದಿ ಮಾಡಬೇಕಾದ ಕೆಲಸವನ್ನ ಕೇವಲ 285 ಜನ ಸಿಬ್ಬಂದಿಗಳು ನಿಭಾಯಿಸುತ್ತಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿಂದ ಡಿ ಗ್ರೂಪ್ ಹುದ್ದೆಯಲ್ಲಿರುವ ವಾಚ್ ಮನ್ ಗಳು, ಅಡುಗೆಯವರು ಕೂಡ ಆಡಳಿತ ನಡೆಸುವಂತಹ ಪರಿಸ್ಥಿತಿ ತುಮಕೂರು ಜಿಲ್ಲೆಯ ಹಾಸ್ಟೆಲ್ ಗಳಲ್ಲಿ ನಿರ್ಮಾಣವಾಗಿದ್ದು ವಿದ್ಯಾರ್ಥಿ ಗಳ ಶೈಕ್ಷಣಿಕ ಹಾಗೂ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತಿದೆ.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಹಾಗೂ ಸಹಾಯಕ ನಿರ್ದೇಶಕರುಗಳ ಕಚೇರಿ ಹಾಗೂ ಇಲಾಖೆ ನಡೆಸುತ್ತಿರುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಹಾಸ್ಟೆಲ್ ಗಳಲ್ಲಿ ಎ,ಬಿ,ಸಿ ಮತ್ತು ಡಿ ವೃಂದದ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 713 ಹುದ್ದೆಗಳಿಗೆ ಮಂಜೂರಾತಿ ಇದೆ. ಆದರೆ ಕೇವಲ 285 ಹುದ್ದೆ ಮಾತ್ರ ಭರ್ತಿಯಾಗಿದ್ದು ಬಾಕಿ 428 ಹುದ್ದೆಗಳು ಖಾಲಿಯಿವೆ. ಗ್ರೂಪ್ ಬಿ ಯಲ್ಲಿ ಗ್ರೇಡ್ 2 ಸಹಾಯಕ ನಿರ್ದೇಶಕರು 2 ಹುದ್ದೆ, ಸಹಾಯಕ ಲೆಕ್ಕಾಧಿಕಾರಿ 1 ಹುದ್ದೆ, ಗ್ರೂಪ್ ಸಿ ಯಲ್ಲಿ ಕ.ಅ 1 ಹುದ್ದೆ, ವಾರ್ಡನ್ 40 ಹುದ್ದೆ, ಶಿಕ್ಷಕರು 9 ಹುದ್ದೆ,ಬೆರಳಚ್ಚುಗಾರರು 5 ಹುದ್ದೆ, ದ್ವಿ ದರ್ಜೆ ಸಹಾಯಕರು 2 ಹುದ್ದೆ, ಜೂನಿಯರ್ ವಾರ್ಡನ್ 6 ಹುದ್ದೆ, ಗ್ರೂಪ್ ಡಿ ಯಲ್ಲಿ 124 ಹುದ್ದೆ, ಅಡುಗೆ ಸಹಾಯಕರು 145 ಹುದ್ದೆ, ರಾತ್ರಿ ಕಾವಲುಗಾರರು 88 ಹುದ್ದೆ, ಜವಾನರು 4 ಹುದ್ದೆ ಒಟ್ಟು 428 ಹುದ್ದೆಗಳ ಕೊರತೆ ಇದೆ.
ಜಿಲ್ಲೆಯಲ್ಲಿರುವ 102 ಹಾಸ್ಟೆಲ್ ಗಳಲ್ಲಿ 98 ಜನ ವಾರ್ಡನ್ ಗಳ ಮಂಜುರಾತಿ ಇದ್ದು ಕೇವಲ 58 ಜನ ವಾರ್ಡನ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಒಬ್ಬ ವಾರ್ಡನ್ ಎರಡು ಮೂರು ಹಾಸ್ಟೆಲ್ ಗಳನ್ನ ನಿರ್ವಹಣೆ ಮಾಡುತ್ತಿದ್ದಾರೆ. ಕೆಲ ವಾರ್ಡನ್ ಗಳನ್ನ ಜಿಲ್ಲಾ ಕಚೇರಿ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಖಾಲಿ ಇರುವ ಕೆಲಸಗಳಿಗೆ ನಿಯೋಜಿಸಲಾಗಿದೆ. ವಾರ್ಡನ್ ಗಳು ತೆರವಾದ ಜಾಗಕ್ಕೆ ಜೂನಿಯರ್ ವಾರ್ಡನ್ ಗಳಿಗೆ ಹಾಸ್ಟೇಲ್ ನಿರ್ವಹಣೆ ಮಾಡುವಂತೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಕೆಲ ಹಾಸ್ಟೆಲ್ ಗಳಲ್ಲಿ ಡಿ ಗ್ರೂಪ್ ನ ವಾಚ್ ಮನ್ ಗಳು, ಅಡುಗೆಯವರನ್ನೂ ಸಹ ವಾರ್ಡನ್ , ಜೂನಿಯರ್ ವಾರ್ಡನ್ ಹುದ್ದೆಗೆ ತಮ್ಮ ಸ್ವಂತ ವೇತನ ಶ್ರೇಣಿಯಲ್ಲಿ ಅರ್ಹವಲ್ಲದ ಹುದ್ದೆಗಳಿಗೆ ನಿಯೋಜನೆ ಮಾಡಲಾಗಿದೆ.
ಸಿಬ್ಬಂದಿ ಕೊರತೆ ನೀಗಿಸಲು ಸಚಿವರ ಆದೇಶ ಉಲ್ಲಂಘನೆ
2023 ರಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಇಲಾಖೆಯಲ್ಲಿ ಶಿಸ್ರು, ಕಾರ್ಯಕ್ಷಮತೆ ಹೆಚ್ಚಿಸಲು ಆದೇಶ ಹೊರಡಿಸಿದ್ದರು. ಅಧಿಕಾರಿಗಳು/ಸಿಬ್ಬಂದಿಗಳು ತಮಗೆ ನಿಗದಿ ಪಡಿಸಿದ ಮತ್ತು ಅರ್ಹತೆಯಿಲ್ಲದ ಹುದ್ದೆಯನ್ನ ಬಿಟ್ಟು ಮೇಲ್ಮಟ್ಟದ ಹುದ್ದೆಗಳನ್ನ ತಮ್ಮ ಸ್ವಂತ ವೇತನ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸುವುದು ಅಶಿಸ್ತಿಗೆ ಕಾರಣವಾಗುವುದಲ್ಲದೇ, ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಅಲ್ಲದೆ ನೌಕರ ವರ್ಗದಲ್ಲಿ ಅಸಮಧಾನ ಕ್ಲೇಷವನ್ನುಂಟು ಮಾಡುವುದಲ್ಲದೆ ಇಲಾಖೆಯ ಸಮರ್ಪಕ ನಿರ್ವಹಣೆ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದರು. ಈ ರೀತಿಯಾಗಿ ಅಧಿಕಾರಿ ಸಿಬ್ಬಂದಿಗಳನ್ನ ನಿಯೋಜಿಸುವುದು ಅಥವಾ ರಾಜಕೀಯ ಪ್ರಭಾವ ಬಳಸುವವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಸೂಚಿಸಿ ಆದೇಶಿಸಿದ್ದರು. ಆದರೆ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆಯಿಂದ ಅಧಿಕಾರಿಗಳು ಸಚಿವರ ಆದೇಶವನ್ನೇ ಉಲ್ಲಂಘನೆ ಮಾಡುವ ಮೂಲಕ ಕಚೇರಿ, ಹಾಸ್ಟೆಲ್ ಗಳ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.
ಅಧಿಕಾರಿ, ಸಿಬ್ಬಂದಿ ಕೊರತೆಯಿಂದ ಇಲಾಖೆಯ ಕಚೇರಿಯಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯಗಳು ನಡೆಯದೇ ಇರುವುದರಿಂದ ಅಧಿಕಾರಿಗಳು ಹಾಗೂ ಫಲಾನುಭವಿಗಳ ನಡುವೆ ವಾಗ್ವಾದಗಳು ನಡೆಯುತ್ತಿದ್ದು ಕಚೇರಿಯ ಅಶಿಸ್ತಿಗೆ ಕಾರಣವಾಗ್ತಿದೆ. ಹಾಸ್ಟೆಲ್ ಗಳಲ್ಲಿ ವಾರ್ಡನ್ ಹಾಗೂ ಸಿಬ್ಬಂದಿ ಕೊರತೆಯಿಂದ ವಿದ್ಯಾರ್ಥಿಗಳ ಮೇಲೆ ವಿವಿಧ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿದೆ. ನಿಯಮಗಳ ಪ್ರಕಾರ ಸಿನಿಯರ್ ವಾರ್ಡನ್ ಕೈಕೆಳಗೆ ಜೂನಿಯರ್ ವಾರ್ಡನ್ ಕರ್ತವ್ಯ ನಿರ್ವಹಿಸಬೇಕು ಆದರೆ ವಾರ್ಡನ್ ಗಳು ಖಾಲಿ ಇರುವ ಸ್ಥಳಕ್ಕೆ ಜೂನಿಯರ್ ವಾರ್ಡನ್ ಗಳನ್ನೇ ಸೀನಿಯರ್ ವಾರ್ಡನ್ ಆಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು ಹಾಸ್ಟೆಲ್ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಮತ್ತೊಂದೆಡೆ ಶೈಕ್ಷಣಿಕ ಅರ್ಹತೆಯಿಲ್ಲದ ವಾಚ್ ಮನ್ ಗಳು, ಅಡುಗೆಯವರನ್ನು ಜೂನಿಯರ್ ವಾರ್ಡನ್ ಗಳ ಕರ್ತವ್ಯಕ್ಕೆ ನಿಯೋಜಿಸಲಾಗಿದೆ, ಇದರಿಂದ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ಪಾಠ, ಪ್ರವಚನ, ಸುರಕ್ಷತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರ ಶೈಕ್ಷಣಿಕ ಗುಣಮಟ್ಟವೂ ಕುಂಠಿತವಾಗುತ್ತಿದೆ.
ಅಧಿವೇಶನದಲ್ಲಿ ಇಲಾಖೆ ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪ.
ಈ ಬಗ್ಗೆ 2023 ರಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯನ್ನ ದಾಖಲಿಸಿಕೊಂಡು ಸಿಬ್ಬಂದಿ ಕೊರತೆಯನ್ನ ಸರಿಪಡಿಸುವಂತೆ ಸರ್ಕಾರಕ್ಕೆ ಚಾಟಿ ಬೀಸಿತ್ತು. ಆದರೂ ಸಹ ಸರ್ಕಾರ ಇಲಾಖೆಯ ಖಾಲಿ ಹುದ್ದೆಗಳನ್ನ ಭರ್ತಿ ಮಾಡದೇ ನಿರ್ಲಕ್ಷ್ಯ ತೋರುತ್ತಲೇ ಬಂದಿದೆ. ಇದೀಗ ಅಧಿವೇಶನದಲ್ಲಿಯೂ ಸಹ ಶಾಸಕರೂ ಒಕ್ಕೋರಲಿನಿಂದ ಇಲಾಖೆಯ ಪರವಾಗಿ ನಿಂತಿದ್ದು ಸಮಸ್ಯೆಗಳನ್ನ ಬಗೆಹರಿಸುಂತೆ ಒತ್ತಾಯ ಮಾಡಿದ್ದಾರೆ.
ಸರ್ಕಾರ ಪರಿಶಿಷ್ಟರ ಕಲ್ಯಾಣಕ್ಕಾಗಿ ಹಲವಾರು ಯೋಜನೆಯಗಳನ್ನ ಜಾರಿಗೆ ತಂದಿದೆ, ಆದರೆ ಆ ಯೋಜನೆಗಳು ಪಲಾನುಭವಿಗೆ ತಲಪಲು ಅಗತ್ಯವಾಗಿ ಬೇಕಾದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿ/ಸಿಬ್ಬಂದಿ ಕೊರತೆ ಇದೆ. ಮತ್ತೊಂದೆಡೆ ರಾಜ್ಯದಲ್ಲಿ ನಿರೋದ್ಯೋಗಿ ಯುವಕ ಯುವತಿಯರು ಉದ್ಯೋಗಕ್ಕಾಗಿ ಛಾತಕ ಪಕ್ಷಿಯಂತೆ ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಕೆಲವರಿಗೆ ವಯೋಮಾನ ದಾಟುತ್ತಿದ್ದು ವಿದ್ಯಾರ್ಹತೆ ಇದ್ದರೂ ಉದ್ಯೋಗದಿಂದ ವಂಚಿತರಾಗುತ್ತೆವೆ ಎಂಬ ಆತಂಕದಲ್ಲಿದ್ದಾರೆ. ಸರ್ಕಾರ ಕಾಳಜಿ ವಹಿಸಿದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆದಂತೆ ನಿರುದ್ಯೋಗ ಸಮಸ್ಯೆಯನ್ನ ನಿವಾರಣೆ ಮಾಡುವ ಮೂಲಕ ಪರಿಶಿಷ್ಟರ ಮಕ್ಕಳ ಕಲ್ಯಾಣಕ್ಕೆ ಮುಂದಾಗಬಹುದಾಗಿದೆ. ಏನಂತೀರಾ…!