ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಿ: ಆಯುಕ್ತ ವಿ.ಅನ್ಬುಕುಮಾರ್


ತುಮಕೂರು: ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ವಿಷಯಗಳಲ್ಲಿ ಕಾರಣಗಳನ್ನು ಹುಡುಕಿ ಅವುಗಳನ್ನು ಪರಿಹರಿಸಲು ಕ್ರಿಯಾಯೋಜನೆ ರೂಪಿಸಿ ಅನುಷ್ಟಾನಗೊಳಿಸುವ ಮೂಲಕ ಫಲಿತಾಂಶವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ೨೦೨೦-೨೧ ನೇ ಎಸ್.ಎಸ್.ಎಲ್.ಸಿ. ಫಲಿತಾಂಶ, ಶಾಲೆಗಳ ಮೂಲಭೂತ ಸೌಲಭ್ಯಗಳು, ವಿವಿಧ ಯೋಜನಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಎ, ಬಿ, ಸಿ ಮತ್ತು ಡಿ ಶ್ರೇಣಿ ಆಧಾರದ ಮೇಲೆ ಗುರುತಿಸಲಾಗಿದೆ. ಸಿ ಮತ್ತು ಡಿ ಶ್ರೇಣಿಯ ಶಾಲೆಗಳಿಗೆ ಹೆಚ್ಚಿನ ಆದ್ಯತೆಯ ಮೇಲೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಒದಗಿಸುವಂತೆ ಕ್ರಮವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶಿಸಿದರು.

ಎಲ್ಲಾ ಹಂತದ ಅಧಿಕಾರಿಗಳು ಅವರವರ ಕರ್ತವ್ಯ ಜವಾಬ್ದಾರಿಗಳನ್ನು ಅರಿತುಕೊಂಡು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಡಯಟ್‌ಗಳಲ್ಲಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕಾರ್ಯಗಳು ಸರಿಯಾಗಿ ನಡೆಯಬೇಕು. ಎಲ್ಲಾ ಶೈಕ್ಷಣಿಕ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಅಧ್ಯಯನಗಳನ್ನು ಕೈಗೊಂಡು ಗುಣಾತ್ಮಕವಾಗಿ ಬದಲಾವಣೆ ತರಲು ಪ್ರಯತ್ನಿಸಬೇಕು. ಡಯಟ್‌ನಲ್ಲಿ ಶಿಕ್ಷಕರು ಹಲವಾರು ತರಬೇತಿ ಪಡೆಯುತ್ತಿದ್ದು, ತರಬೇತಿಯ ನಂತರ ತರಬೇತಿಯ ಅಂಶಗಳನ್ನು ತರಗತಿಯಲ್ಲಿ ಬಳಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಡಯಟ್ ಅಧಿಕಾರಿಗಳು ಅನುಪಾಲನೆ ಮಾಡುವಂತೆ ತಿಳಿಸಿದರು.

ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ರಾಜ್ಯ ಹಂತದಿಂದಲೇ ಜಿಲ್ಲಾವಾರು, ತಾಲ್ಲೂಕುವಾರು, ವಿಷಯವಾರು, ಭಾಷಾವರು, ಮಾಧ್ಯಮವಾರು, ಆಡಳಿತಮಂಡಳಿವಾರು ವಿಶ್ಲೇಷಣೆ ಮಾಡಿ ನೀಡಲಾಗಿದೆ. ಇದರಂತೆ ಎಲ್ಲಾ ಶಾಲೆಗಳಲ್ಲಿಯೂ ತಮ್ಮ ತಮ್ಮ ಶಾಲೆಗಳ ವಿಶ್ಲೇಷಣೆಯ ಪ್ರತಿಯನ್ನು ಇಟ್ಟುಕೊಂಡು ಕಡಿಮೆ ಫಲಿತಾಂಶ ಬಂದಿರುವ ವಿಷಯಗಳಲ್ಲಿ ಕಾರಣಗಳನ್ನು ಹುಡುಕಿ ಅವುಗಳನ್ನು ಪರಿಹರಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ಅನುಷ್ಠಾನಮಾಡಲು ಸೂಚಿಸಿದರು.

ಸಭೆಯಲ್ಲಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಾಡಿರುವ ವಿಶ್ಲೇಷಣಾ ವರದಿ ಹಾಗೂ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ವಿಶ್ಲೇಷಣಾ ವರದಿ ಬಗ್ಗೆ ಚರ್ಚಿಸಿದರು.
ಈ ವೇಳೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿಗಳು, ನೋಡಲ್ ಅಧಿಕಾರಿಗಳು, ಶಿಕ್ಷಣ ಇಲಾಖೆ ಸಹನಿರ್ದೇಶಕರು, ತುಮಕೂರು ಜಿಲ್ಲೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು(ಆಡಳಿತ), ಉಪ ನಿರ್ದೇಶಕರು(ಅಭಿವೃದ್ದಿ), ಡಿ.ವೈ.ಪಿ.ಸಿ., ಶಿಕ್ಷಣಾಧಿಕಾರಿಗಳು, ಡಯಟ್‌ನ ಉಪನ್ಯಾಸಕರುಗಳು, 10 ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!