ಬೆಂಗಳೂರು : ಪರಪ್ಪನ ಅಗ್ರಹಾರ ಬಂಧಿಖಾನೆಯಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರು ಅವರು ತಿಳಿಸಿದರು.

ಸದಾಶಿವನಗರದ ತಮ್ಮ‌ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ಆಧರಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿ, ತಡರಾತ್ರಿ 1 ಗಂಟೆವರೆಗೂ ತನಿಖೆ ಕೈಗೊಂಡಿದ್ದಾರೆ. ತನಿಖೆಯ ಪ್ರಾಥಮಿಕ ವರದಿ ಆಧರಿಸಿ ಏಳು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದರು.

ಜೈಲರ್ ಶರಣಬಸವ ಅಮಿನ್‌ಘಡ್, ಪ್ರಭು ಎಸ್.ಖಂಡೇಲ್.ವಾಲ್, ಅಸಿಸ್ಟೆಂಟ್ ಜೈಲರ್ಸ್ ಶ್ರೀಕಾಂತ್ ತಳವಾರ್, ಎಲ್.ಎಸ್.ತಿಪ್ಪೇಸ್ವಾಮಿ, ಹೆಡ್ ವಾರ್ಡರ್ಸ್ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್ ಬಸ್ಸಪ್ಪ ತೇಲಿ ಅಮಾನತು ಆದವರು ಎಂದು ತಿಳಿಸಿದರು.

ಯಾವ ರೀತಿ ಘಟನೆ ನಡೆದಿದೆ ಎಂಬುದರ ಕುರಿತು ವರದಿ ಕೇಳಿದ್ದೇನೆ. ಡಿಜಿ ಅವರು ಬೆಳಗ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗೆ ಅವಕಾಶ‌ ಮಾಡಿಕೊಟ್ಟಿರುವುದು ಎಂಬ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದರೆ, ವರದಿ ಆಧರಿಸಿ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು‌ ಎಂದು ಹೇಳಿದರು.

ಪದೇಪದೇ ಇಂತಹ ಘಟನೆಗಳು ಆಗಬಾರದು‌. ರಾಜ್ಯದಲ್ಲಿ ಬಂಧಿಖಾನೆಗಳಲ್ಲಿ ಸಿಸಿ ಕ್ಯಾಮೆರಾ, ಜಾಮರ್ ಹಾಕಿದರು ಸಹ ಇಂತಹ ಘಟನೆಗಳು ಜರುಗಿವೆ‌. ಅಧಿಕಾರಿಗಳು ಮತ್ತಷ್ಟು ಕಠಿಣವಾಗಿ ಕೆಲಸ‌ ಮಾಡಬೇಕಾಗುತ್ತದೆ. ಯಾರನ್ನು ರಕ್ಷಿಸುವ ಅಗತ್ಯವಿಲ್ಲ. ತನಿಖೆ ಅಸರಂಭವಾಗಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ‌ ಕ್ರಮ ಜರುಗಿಸಲಾಗುವುದು. ಮುಂದೆ ಈ ರೀತಿಯ ಘಟನೆಗಳಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.

ಹೈ ಫ್ರಿಕ್ವೆನ್ಸಿ ಜಾಮರ್ ಅಳವಡಿಸಲಾಗಿತ್ತು. ಸುತ್ತಮುತ್ತಲಿನ ಏರಿಯಾಗಳಿಗು ತೊಂದರೆಯಾಗುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಫ್ರೀಕ್ವೆನ್ಸಿ ಕಡಿಮೆ ಮಾಡಲಾಯಿತು‌. ಬಂಧಿಕಾಕನೆ ಒಳಗೆ ಫೋಟೋ ತೆಗೆದಿರುವವರು ಯಾರು? ಮೊಬೈಲ್ ಹೇಗೆ ಹೋಯಿತು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ‌ ಎಂದರು.

ಎಲ್ಲರು ಜೈಲಿನ ಒಳಗೆ ಹೋಗಲು ಸಾಧ್ಯವಿಲ್ಲ. ಜೈಲ್ ಸೂಪರಿಡೆಂಟ್ ಅವಕಾಶ ನೀಡಿದವರು ಮಾತ್ರ ಹೋಗಲು ಸಾಧ್ಯ. ಜೈಲಿಗೆ ಭೇಟಿ ನೀಡಿದವರು ಸಹ ತನಿಖೆಯಲ್ಲಿ ಹೊರಬರಲಿದೆ. ಕಾರಣೀಕರ್ತರು ಯಾರು ಎಂಬ ಸತ್ಯಾಂಶ ಹೊರಬರಲಿದೆ. ಮೊಬೈಲ್ ಬಳಕೆಗೆ ಅವಕಾಶ ಕೊಟ್ಟವರು ಯಾರು. ಮೇಲಾಧಿಕಾರಿಗಳು ಯಾರೇ ಇದ್ದರು ಕ್ರಮ ಜರುಗಲಿದೆ ಎಂದು ಹೇಳಿದರು.

ನಟ ದರ್ಶನ್ ಗೆ ರಾಜಾತಿಥ್ಯ ಬೆಂಗಳೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯೆ: video

ದಿನದ 24 ಗಂಟೆಯೂ ನಿಗಾವಹಿಸಲಾಗಿರುತ್ತದೆ. ಬ್ಯಾರಕ್‌ಗೆ ಯಾರು ಬರುತ್ತಾರೆ? ಯಾರು ಹೋಗುತ್ತಾರೆ ಎಂಬುದನ್ನು ಪರಿಶೀಲಿಸಲಾಗುವುದು. ವೈಫಲ್ಯ ಆಗಿರುವುದು ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ನನಗೆ ಯಾರ ಒತ್ತಡವು ಇಲ್ಲ. ನನ್ನ ಲೆವೆಲ್‌ವರೆಗೆ ಯಾರು ಮುಟ್ಟಲಾಗುವುದಿಲ್ಲ. ಈ ಪ್ರಕರಣ ಈಗ ಆಚೆ ಬಂದಿರುವುದರಿಂದ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು


ಯಾವುದೇ ರೀತಿಯಲ್ಲಿ ಈ‌ ಪ್ರಕರಣವನ್ನು ಸಡಿಲ ಮಾಡುವುದಕ್ಕೆ ಸಾಧ್ಯವಿಲ್ಲ. ಕಾನೂನು ಪ್ರಕಾರ ಈವರೆಗೆ ಕ್ರಮ ತೆಗೆದುಕೊಂಡಿದ್ದೇವೆ. ಮುಂದೆಯೂ ಕಾನೂನು ಪ್ರಕಾರವೇ ಕ್ರಮ ಜರುಗಲಿದೆ. ಯಾರ ಒತ್ತಡಕ್ಕು‌ ಮಣಿಯುವ ಪ್ರಶ್ನೆ ಬರುವುದಿಲ್ಲ‌. ಈ ಬಗ್ಗೆ ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದರು.

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಸವಲತ್ತು ನೀಡಿರುವ ಬಗ್ಗೆ ಯಾವ ರೀತಿಯಲ್ಲಿ ಘಟನೆ‌ ನಡೆಯಿತು. ಅದಕ್ಕೆ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ಮುಂದೆ ಇಂತಹ ಘಟನೆಗಳಾದಂತೆ ಏನೆಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂಬುದನ್ನು ರಾಜ್ಯದ ಜನತೆಯ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ಪೊಲೀಸರು ಸಲ್ಲಿಸಲಿರುವ ಚಾರ್ಜ್‌ಶೀಟ್ ಮೇಲೆ ಯಾವುದೇ ರೀತಿಯ ಅನುಮಾನ‌ ಪಡುವುದು ಬೇಡ. ನಾವು ಕಾನೂನು‌ ಪ್ರಕಾರ ಕ್ರಮ ಜರುಗಿಸುತ್ತೇವೆ. ಅಸರೋಪಿಗಳನ್ನು ಬೇರೆ ಕಡೆ‌ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಾಗುವುದು. ಮರೆಮಾಚುವ, ಸುಳ್ಳು ಹೇಳುವ ಪ್ರಮೇಯ ನನಗಿಲ್ಲ. ತಪ್ಪಿನಲ್ಲಿ ಯಾರ ಪಾತ್ರ ಇದೆ ಎಂಬುದು ಕಂಡು ಬಂದರು ಕ್ರಮ ಜರುಗಲಿದೆ‌ ಎಂದರು.

ಈ ಪ್ರಕರಣದಿಂದ ಗೃಹ ಇಲಾಖೆಯನ್ನು ಅನುಮಾನದಿಂದ ನೋಡುವ ಅವಶ್ಯಕತೆ ಇಲ್ಲ.‌ ಅನೇಕ ಒಳ್ಳೆ ಕೆಲಸಗಳನ್ನು ಇಲಾಖೆ ಮಾಡಿದೆ. ಶೇ. 95ರಷ್ಟು ಕೊಲೆ‌ ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಕೆಟ್ಟದು ಅಂದುಕೊಳ್ಳುವುದು ಅಗತ್ಯವಿಲ್ಲ. ಯಾರು, ಎಷ್ಟೇ ದೊಡ್ಡ ವ್ಯಕ್ತಿ ತಪ್ಪು ಮಾಡಿರಲಿ. ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸುತ್ತೇವೇ ಎಂದು ರಾಜ್ಯದ ಜನತೆಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here