ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ:ಮುರುಳಿದರ್ ಹಾಲಪ್ಪ.

ತುಮಕೂರು: ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತಾತ್ವಾರ ಹೆಚ್ಚಿದ್ದು, ಕೂಡಲೇ ಗಮನ ಹರಿಸಬೇಕು, ಜಿಲ್ಲೆಯ ಅಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಚುರುಕುಗೊಳಿಸಿ ಕೂಲಿ ಕಾರ್ಮಿಕರ ನೆರವಿಗೆ ಮುಂದಾಗಬೇಕೆಂದು ಒತ್ತಾಯ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ಅವರೊಂದಿಗೆ ಜಿಪಂ ಕಚೇರಿಗೆ ತೆರಳಿ ಜಿಲ್ಲಾ ಪಂಚಾಯ್ತಿ ಸಿಇಒ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ತುಮಕೂರು ಜಿಲ್ಲೆ ಬರಪೀಡಿತ ಜಿಲ್ಲೆಯಾಗಿರುವುದರಿಂದ ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಯಾವ ಯಾವ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದರ ಬಗ್ಗೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಬೋರ್ ವೆಲ್ ಕೊರೆಸುವ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ನರೇಗ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣವನ್ನು ಪಾವತಿಸಬೇಕು, ನರೇಗ ಅಡಿಯಲ್ಲಿ ಹೆಚ್ಚು ಹೆಚ್ಚು ಕೆಲಸ ನೀಡುವಂತೆ ಕೇಂದ್ರ ಸರ್ಕಾರವೂ ಸೂಚಿಸಿರುವ ಹಿನ್ನಲೆಯಲ್ಲಿ ಗರಿಷ್ಠ ಪ್ರಮಾಣದ ಮಾನವ ದಿನಗಳನ್ನು ಸೃಷ್ಟಿಸಲು ಅಧಿಕಾರಿಗಳು ಮುಂದಾಗಬೇಕು, ನರೇಗ ಯೋಜನೆಯಲ್ಲಿ 275 ರೂ ಕೂಲಿ ಹಣದ ಬದಲಾಗಿ 375 ರೂ. ನೀಡಬೇಕೆಂದು ಒತ್ತಾಯಿಸಿದರು.

ಡಿಆರ್‌ಡಿಎ ಶಾಖೆಯು ನಿರ್ವಹಿಸುವ ವಿವಿಧ ವಸತಿ ಯೋಜನೆಗಳಾದ ಆಶ್ರಯ, ಡಾ.ಅಂಬೇಡ್ಕರ್, ಇಂದಿರಾ ಆವಾಜ್ ಯೋಜನೆ, ಬಸವ ವಸತಿ ಯೋಜನೆಗಳ ಅನುಷ್ಠಾನ, ಆಶ್ರಯ ನಿವೇಶನ ಯೋಜನೆ ಅನುಷ್ಠಾನ, ವಸತಿ ಯೋಜನೆಗಳಡಿ ಬರುವ ದೂರುಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾಮೀಣ ಭಾಗದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು, ಕೃಷಿ ಸಂಬಂಧಿತ ಗುಡಿ ಕೈಗಾರಿಕೆಗಳನ್ನು ಚಾಲ್ತಿ ಮಾಡಿ ಸರ್ಕಾರವೇ ಅವರಿಗೆ ಮೂಲ ಸಹಾಯ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದರ ಜೊತೆಗೆ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕೆಂದು ಮನವಿ ಮಾಡಿದರು.

ಕೆರೆಗಳ ಹೂಳು ತೆಗೆಯುವುದು, ಏರಿ ನಿರ್ಮಾಣ, ಕಂದಕ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಮಳೆ ನೀರು ಸಂಗ್ರಹ ಕಾಮಗಾರಿ, ಕೊಳವೆ ಬಾವಿಗೆ ಜಲ, ಮರುಪೂರಣ ಗುಂಡಿ, ಸಸಿ ನೆಡುವಿಕೆಯಂತಹ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿದೆ. ರೈತರಿಗೆ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು, ಕೃಷಿ ಇಲಾಖೆಯಲ್ಲಿರುವ ಮದ್ಯವರ್ತಿಗಳ ಹಾವಳಿ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕು, ಸುವರ್ಣ ಗ್ರಾಮೋದಯ ಯೋಜನೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು, ರೈತರು ತಮ್ಮ ತೋಟಗಳಿಗೆ ಪಂಪು ಮೋಟಾರ್ ಅಳವಡಿಸಲು ವಿದ್ಯುತ್ ಸಮಸ್ಯೆ ಎದುರಾಗಬಹುದಾಗಿದ್ದು, ಕೂಡಲೇ ಅಂತಹ ಸಮಸ್ಯೆಗಳನ್ನು ಬಗೆಹರಿಸಬೇಕು, ಸಣ್ಣ ನೀರಾವರಿ, ರೇಷ್ಮೆ ಇಲಾಖೆ, ತೋಟಗಾರಿಕೆ, ಸಾಮಾಜಿಕ ಅರಣ್ಯ ಮತ್ತಿತರೆ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದರ ಜೊತೆಗೆ ಅವರಿಗೆ ಕೂಲಿ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಎಂದು ಹಲವಾರು ಸಮಸ್ಯೆಗಳ ಬಗ್ಗೆ ಮುರಳೀಧರ ಹಾಲಪ್ಪ ಅವರು ಸಿಇಒ ಅವರ ಗಮನಕ್ಕೆ ತಂದರು.

ಸಮಸ್ಯೆಗಳನ್ನು ಆಲಿಸಿದ ಸಿಇಒ ಗಂಗಾಧರಸ್ವಾಮಿ, ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅಲ್ಲೆಲ್ಲಾ ಖುದ್ದು ನಾನೇ ಭೇಟಿ ನೀಡಿ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ಕೈಗೊಳ್ಳುತ್ತಿದ್ದೇನೆ. ನೀವು ಸಲ್ಲಿಸಿರುವ ಮನವಿಯಲ್ಲಿ ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಭೇಟಿ ನೀಡಿ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಆಯಾ ಗ್ರಾಮ ಪಂಚಾಯ್ತಿಯಲ್ಲಿ ೧೪-೧೫ ಹಣಕಾಸಿನ ಯೋಜನೆಯ ಅನುದಾನ ಬಳಸಿಕೊಂಡು ಬೋರ್‌ವೆಲ್ ಕೊರೆಸುವುದು ಆಯಾ ಪಂಚಾಯ್ತಿಗಳ ಜವಾಬ್ದಾರಿ, ಈಗಾಗಲೇ ಜಿಲ್ಲೆಯಲ್ಲಿ ಕೊರೆಸಿರುವ ಬೋರ್‌ವೆಲ್‌ಗಳಿಗೆ ೩೪ ಕೋಟಿ ರೂ. ಹಣ ಬಾಕಿ ಇದೆ.  ಹಣವನ್ನೇ ಇನ್ನೂ ಪಾವತಿ ಮಾಡಿಲ್ಲ, ಹೊಸ ಬೋರ್‌ವೆಲ್‌ಗಳಿಗೆ ಅನುದಾನದ ಕೊರತೆ ಇದೆ. ಆದ್ದರಿಂದ ಆಯಾ ಪಂಚಾಯ್ತಿಗಳ ಮೂಲಕವೇ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಿಇಒ ಹೇಳಿದರು.

ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಚೌದ್ರಿ ರಂಗಪ್ಪ, ಹಿರಿಯ ಉಪಾಧ್ಯಕ್ಷರಾದ ಹೆಚ್.ಸಿ.ಹನುಮಂತಯ್ಯ, ಮರಿಚನ್ನಮ್ಮ, ಪ್ರಧಾನ ಕಾರ್ಯದರ್ಶಿ ರೇವಣಸಿದ್ಧಯ್ಯ, ಆಟೋರಾಜು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮ್ಮದ್, ಅಶ್ವತ್ಥ್, ಸಂಜೀವ್‌ಕುಮಾರ್, ಗೀತಾ, ಪ್ರಕಾಶ್, ಪ್ರಸನ್ನಕುಮಾರ್, ಕಾಂತರಾಜು, ಮಂಜುನಾಥ್, ಶಂಕರ್, ಶಿವಾಜಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು, ತಾಲ್ಲೂಕು ಬ್ಲಾಕ್ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!