ವರದಿ: ರಮೇಶ್‌ಗೌಡ
ಗುಬ್ಬಿ: ಸಂಘ ಸಂಸ್ಥೆಗಳ ನಿರ್ವಹಣೆ ಮಾಡಿ ಸಮಾಜದ ಶ್ರೇಯೋಭಿವೃದ್ಧಿ ಕಾಯಕ ಮಾಡಲು ಅಡ್ಡಿಯಾಗುವ ನಿಂದಕರ ಮಧ್ಯೆ ಸಮಾಜಮುಖಿ ಯುವಕರು ತಮ್ಮ ಸಂಕಲ್ಪದಂತೆ ಸೇವೆ ಸಲ್ಲಿಸಬೇಕು ಎಂದು ತೆವಡೇಹಳ್ಳಿ ಶ್ರೀ ಚನ್ನಬಸವೇಶ್ವರ ಗದ್ದುಗೆ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಶ್ರೀ ವೀರಶೈವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಗುಬ್ಬಿ ನಗರ ವೀರಶೈವ ಯುವ ಸೇವಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಗುಬ್ಬಿ ಪಟ್ಟಣಕ್ಕೆ ಸೀಮಿತವಾಗಿ ರಚಿತವಾದ ಸಂಘಟನೆ ಇಡೀ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಬೇಕು. ತಾಲ್ಲೂಕು ಮಟ್ಟದ ಸಂಘಟನೆಗೆ ಯುವ ಶಕ್ತಿ ಮುಂದಾಗಿ ಲಿಂಗಾಯಿತ ವೀರಶೈವ ಸಮಾಜದ ಎಲ್ಲಾ ಯುವಶಕ್ತಿ ಒಗ್ಗೂಡಿಸಿಕೊಂಡು ಸಮುದಾಯದಲ್ಲಿ ಬಲಹೀನರಾದವರ ಪರ ನಿಂತು ಸಮಾಜ ಕಟ್ಟಬೇಕು ಎಂದು ಸಲಹೆ ನೀಡಿದರು.
ಉತ್ತಮ ಅಜಂಡಾ ರೂಪಿಸಿ ಕಾರ್ಯಗತವಾದ ಯುವ ಸಮಿತಿ ಮುನ್ನುಗ್ಗುವ ಹಾಗೂ ಹಿಡಿದ ಕೆಲಸ ಸಾಧಿಸುವ ಛಲ ಹೊಂದಿರಬೇಕು. ವೇದಿಕೆ ಕಾರ್ಯಕ್ರಮಕ್ಕೆ ಮೀಸಲಾಗದೆ ಸಮಾಜದಲ್ಲಿನ ಬಡವರ ಪರ ಕೆಲಸ ಮಾಡಬೇಕು ಎಂದ ಅವರು ಕಲ್ಯಾಣ ಮಂಟಪ ನಿರ್ಮಾಣ ಆಲೋಚನೆ ಜೊತೆ ಸಂಘಟನೆಗೆ ಅವಶ್ಯವಿರುವ ಆರ್ಥಿಕ ಸದೃಢತೆಗೆ ಮೊದಲು ಅಂಗಡಿ ಸಂಕೀರ್ಣ ನಿರ್ಮಾಣ ಮಾಡಲು ಮುಂದಾಗಿ ಅಲ್ಲಿನ ಆದಾಯದಲ್ಲಿ ಕಷ್ಟದ ಸಮಾಜದ ಮಂದಿಗೆ ಸಹಕಾರ ಮಾಡಿ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಅಸೂಯೆ ಗುಣ ನಮ್ಮ ಸಮಾಜದಲ್ಲಿ ಹೆಚ್ಚಾಗಿ ಕಾಣುತ್ತದೆ. ಏಳಿಗೆ ಸಹಿಸದ ಗುಣದಿಂದ ನಮ್ಮಲ್ಲಿ ಒಗ್ಗಟ್ಟು ಮೂಡುತ್ತಿಲ್ಲ. ನಮ್ಮಲ್ಲಿನ ಒಡಕು ಬಳಸಿಕೊಂಡು ರಾಜಕೀಯ ಶಕ್ತಿ ಬೆಳೆಸಿಕೊಳ್ಳುತ್ತಿರುವ ಮಂದಿಯೇ ಇಲ್ಲಿ ಹೆಚ್ಚಾಗಿದ್ದಾರೆ. ಈ ಕಾರಣ ಯುವಕರು ಸಂಘಟಿತರಾಗಿ ಸಮಾಜದವರಿಗೆ ಅನ್ಯಾಯ ಆದಲ್ಲಿ ಬೆನ್ನೆಲುಬಾಗಿ ನಿಲ್ಲಬೇಕು. ತಂದೆ ತಾಯಿ, ಗುರು ಹಿರಿಯರಿಗೆ ಗೌರವ ನೀಡಿ ಸಮಾಜದ ನಮ್ಮ ಪರಂಪರೆ ಎತ್ತಿ ಹಿಡಿಯಿರಿ. ಕಾಲು ಎಳೆಯುವ ಪ್ರವೃತ್ತಿಯ ಜನರಿಂದ ದೂರವಿದ್ದು ಅಜಂಡ ಪ್ರಕಾರ ಕೆಲಸ ಮಾಡಿ ಎಂದು ಕರೆ ನೀಡಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ರಾಜಕೀಯ ರಂಗದಲ್ಲಿ ಯುವಕರು ಹಿಂದುಳಿಯುತ್ತಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಹಲವು ಕೆಲಸ ಸಾಧಿಸಲು ಸಾಧ್ಯ. ಸಂಘಟನೆ ಬಲಪಡಿಸಿ ಎಲ್ಲಾ ದಾನಿಗಳನ್ನು ಭೇಟಿ ಮಾಡಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಮುಂದಾಗಬೇಕು. ಇಡೀ ತಾಲ್ಲೂಕಿನಲ್ಲಿ ಯುವಕರನ್ನು ಸಂಘಟಿಸಿ ಸಮಾಜದ ಅಭಿವೃದ್ಧಿಗೆ ಉತ್ತಮ ಕಾರ್ಯಕ್ರಮ ರೂಪಿಸಿಕೊಳ್ಳಿ. ಈ ಕಾರ್ಯಕ್ಕೆ ಹಿರಿಯರ ಮಾರ್ಗದರ್ಶನ ಪಡೆದು ಯುವಕರು ಜವಾಬ್ದಾರಿಯುತ ಕೆಲಸ ಮಾಡಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಗುಬ್ಬಿ ನಗರ ವೀರಶೈವ ಯುವ ಸೇವಾ ಸಮಿತಿ ಅಧ್ಯಕ್ಷರಾಗಿ ಅರ್ಜುನ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಾಗರಾಜ್, ವಿನಯ್ ನೇಮಕವಾಗಿದ್ದು ನಿರಂಜನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ಪ್ರೀತಂ, ಖಜಾಂಚಿಯಾಗಿ ನವೀನ್ ಆರಾಧ್ಯ ಸೇರಿದಂತೆ ಒಟ್ಟು 46 ಮಂದಿ ಸದಸ್ಯರ ಸಮಿತಿಯಲ್ಲಿ 20 ಮಂದಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಲ್ಯಾಣ ಮಂಟಪ ನಿರ್ಮಾಣ, ರುದ್ರಭೂಮಿ ಅಭಿವೃದ್ದಿ ಹಾಗೂ ಕೈಲಾಸರಥ ವಾಹನ ಬಗ್ಗೆ ಚರ್ಚೆ ಮಾಡಲಾಯಿತು.
ವೇದಿಕೆಯಲ್ಲಿ ಲಿಂಗಾಯಿತ ವೀರಶೈವ ಮಹಾಸಭಾದ ಅಧ್ಯಕ್ಷ ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಬಸವರಾಜು, ಮುಖಂಡರಾದ ಕಾಯಿ ಸುರೇಶ್, ಅರುಣ್ ಸೇರಿದಂತೆ ವೀರಶೈವ ಮಹಿಳಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.