ಶೂದ್ರ ರಾಜಕಾರಣಕ್ಕೆ ಇಂದಿಗೂ ಅಧಿಕಾರ ದಕ್ಕಿಲ್ಲ: ಚಿಂತಕ ನಟರಾಜ್ ಬೂದಾಳ್

ತುಮಕೂರು: ಶೂದ್ರ ರಾಜಕಾರಣಕ್ಕೆ ಈ ಹೊತ್ತಿಗೂ ಅಧಿಕಾರ ದಕ್ಕಿಲ್ಲ ಎಂದು ಚಿಂತಕ ನಟರಾಜ್ ಬೂದಾಳ್ ವಿಷಾದಿಸಿದರು.

ಅವರು ಗುಬ್ಬಿಯ ಕರ್ನಾಟಕ ರಂಗ ಅಧ್ಯಯನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ಎರಡು ಸಂವಿಧಾನ ಕೊಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಒಂದು ರಾಜಕೀಯ ಸಂವಿಧಾನ ಮತ್ತು ಸಾಂಸ್ಕೃತಿಕ ಸಂವಿಧಾನ, ರಾಜಕೀಯ ಸಂವಿಧಾನ ನಮ್ಮ ಪ್ರಯತ್ನವಿಲ್ಲದೆ ದಕ್ಕಿರುವಂತದ್ದು. ಆದರೆ ಕೇವಲ ರಾಜಕೀಯ ಸಂವಿಧಾನ ಇಡಿಯಾಗಿ ಶೂದ್ರ ಸಮುದಾಯಕ್ಕೆ ಅಧಿಕಾರವನ್ನು ದಕ್ಕಿಸಿಕೊಡಲಾರದು  ಎಂದ ಅವರು  ಹಾಗಾಗಿ ಸಾಂಸ್ಕೃತಿಕ ಸಂವಿಧಾನ ಜೊತೆಯಲ್ಲಿದ್ದರೆ ಮಾತ್ರ ಅಧಿಕಾರ ದಕ್ಕಿಸಿಕೊಳ್ಳಲು ಸಾಧ್ಯ ಎಂದರು.

ಅಕ್ಷರ ಬಲ, ಸಂಖ್ಯಾಬಲ, ಆರ್ಥಿಕ ಬಲ ಮತ್ತು ಹೋರಾಟದ ಬಲದಿಂದ ಅಧಿಕಾರದ ಕೇಂದ್ರಗಳಿಗೆ ಹೋಗುತ್ತಾರೆ. ಆದರೆ ಅಧಿಕಾರ ದಕ್ಕಿಲ್ಲ. ಕಾರಣ ಸಾಂಸ್ಕೃತಿಕ ಸಂವಿಧಾನವನ್ನು ತಮ್ಮದಾಗಿಸಿಕೊಳ್ಳಲು ಶೂದ್ರ ಸಮೂಹಕ್ಕೆ ಸಾಧ್ಯವಾಗಿಲ್ಲ ಎಂದರು.

ಕರ್ನಾಟಕದ ಈ ಹೊತ್ತಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಆಲೋಚನೆಗಳು, ವಿಚಾರಗಳು ವ್ಯಾಪಕವಾಗಿ ವಿಸ್ತಾರಗೊಳ್ಲುತ್ತಿವೆ. ಇಡಿಯಾಗಿ ಸಮೂಹವನ್ನು ತಲುಪಿಸುವ, ಪ್ರಯತ್ನಗಳು ಸಾಗುತ್ತಿವೆ. ಇದು ಈ ಹೊತ್ತಿನ ತುರ್ತು ಅಗತ್ಯ ಕೂಡ ಎಂದರು.

ಸಾಂಸ್ಕತೃತಿಕ ರಾಜಕಾರಣವನ್ನು ನಿರ್ವಹಿಸಬಲ್ಲವರಿಗೆ ಅಧಿಕಾರ ದಕ್ಕಿದೆ. ಅವರೇ ಈಗಲೂ ಅಧಿಕಾರದಲ್ಲಿದ್ದಾರೆ. ಸಂವಿಧಾನವನ್ನು ಪಕ್ಕಕ್ಕಿಡಿ ಅಂದವರು ಅಧಿಕಾರ ಅನು‘ವಿಸಿಕೊಂಡು ಬರುತ್ತಿದ್ದಾರೆ. ಎಂದರು.

ಅವರಿಗೆ ಅಕ್ಷರ ಹೊಸತ್ತಲ್ಲ, ಅವರ ಹೋರಾಟದ ಸ್ವರೂಪವೇ ಬೇರೆ. ಅವರಿಗೆ ಬೇಕಾದ ಒಪ್ಪಿಗೆಯನ್ನು ಇದೇ ಶೂದ್ರ ಸಮುದಾಯದಿಂದಲೇ ಪಡೆಯುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣದಾಸ್ ಮಾತನಾಡಿ ಬಾಬಾ ಸಾಹೇಬರನ್ನು ಮನೆ ಮನೆಗಳಿಗೂ ತಲುಪಿಸುವ ಕೆಲಸವಾಗಬೇಕು ಎಂದರು. ನಾಟಕಗಳ ಮೂಲಕ, ಹೋರಾಟದ ಹಾಡುಗಳ ಮೂಲಕ ಜನಸಮುದಾಯವನ್ನು ತಲುಪಿದೆ ಎಂದರು. ಈಗ ತಯಾರಾಗುತ್ತಿರುವ ಅಂಬೇಡ್ಕರ್ ಕುರಿತ ನಾಟಕ ಯಶಸ್ವಿಯಾಗಲಿ ಎಂದು ಹಾರೈಸಿದರು.

ಪತ್ರಕರ್ತ ಹಾಗೂ ಝೆನ್ ಟೀಮ್ ಉಗಮ ಶ್ರೀನಿವಾಸ್ ಮಾತನಾಡಿ ಇತಿಹಾಸವನ್ನು ಮುರಿದು ಕಟ್ಟಬೇಕಾಗಿದೆ. ದುರ್ಬಲರನ್ನು, ತಬ್ಬಲಿ ಸಮುದಾಯಗಳನ್ನು ಮತ್ತಷ್ಟು ತುಳಿಯುವ ವ್ಯವಸ್ಥಿತ ಸಂಚು ಶತಮಾನಗಳಿಂದ ನಡೆಯುತ್ತಿದ್ದು ಜನಸಮುದಾಯದ ಪರ ನೊಂದವರ ಪರ ಹೋರಾಟ ಮಾಡುತ್ತಿದ್ದವರನ್ನು ಹೆಸರನ್ನೇ ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಡಾ. . ನಾಗರಾಜ್ ಮಾತನಾಡಿದರು. ರವಿಕುಮಾರ್ ನೀಹ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕ ಕೌತಮಾನರಹಳ್ಳಿ ಕಾಂತರಾಜು, ಆಯೋಜಕ ದಲಿತರವಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದದಲ್ಲಿ ರಾಜಪ್ಪ ದಳವಾಯಿ, ಗ್ಯಾರಂಟಿ ರಾಮಣ್ಣ, ಬಿ.ಟಿ. ಮಾನವ ಅವರನ್ನು ಗೌರವಿಸಲಾಯಿತು. ಲಕ್ಷ್ಮೀರಂಗಯ್ಯಕೆ.ಎನ್. ನಿರೂಪಿಸಿದರು.

error: Content is protected !!