ವಿಧಾನಸಭೆಯ ಸಭಾಪತಿಗೆ ಶಿವಾನಂದ ಶಿವಾಚಾರ್ಯರ ಕಿವಿಮಾತು

ತುಮಕೂರು: ವಿಧಾನಸಭೆಯ ಅಧಿವೇಶನದ ವೇಳೆ ಶಾಸಕರ ವರ್ತನೆ, ಗದ್ದಲ ಗಳ ಕುರಿತು ತುಮಕೂರಿನ ಹಿರೇಮಠದ ಶೀವಾನಂದ ಶಿವಾಚಾರ್ಯರು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯರಿಗೆ ಅಕ್ಕಮಹಾದೇವಿಯವರ ವಚನದ ಮೂಲಕ ಕಿವಿಮಾತು ಹೇಳಿದ್ದಾರೆ.

ವಿಧಾನಸಭೆಯ ಸಭಾಪತಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಕಿವಿಮಾತು

“ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದಡೆ ಎಂತಯ್ಯ?

ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯ?

ಸಂತೆಯೊಳಗೊಂಂದು ಮನೆಯ ಮಾಡಿ ಶಬ್ದಕ್ಕೆ ಮನೆಯ ನಾಚಿದಡೆಂತಯ್ಯ?

ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ,

ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.”

ಇದು ಅಕ್ಕಮಹಾದೇವಿಯ ವಚನ.

ಮಹಾದೇವಿಯಕ್ಕನ ಈ ವಚನವನ್ನು ಪ್ರಸ್ತುತ ವಿಧಾನಸಭೆಯ ಸಭಾಪತಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪದೇ ಪದೇ ಮತ್ತು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವುದು ಒಳ್ಳೆಯದು. ವಚನವಿದು ಅವರ ಮನೋಬಲವನ್ನು ಮತ್ತು ತಾಳ್ಮೆಯನ್ನು ಹೆಚ್ಚಿಸುವಲ್ಲಿಅಹಂಭೂಮಿಕೆಯನ್ನು ವಹಿಸುತ್ತದೆ.

ವಿಧಾನಸಭೆಯ ಸಭಾಪತಿಯಾದ ಮೇಲೆ ಶಾಸಕರ ಗದ್ದಲ, ಗಲಾಟೆ, ಗುಟುರುಗಳಿಗೆ ಅಂಜದೆಅವರನ್ನು ಸಹಿಸಿಕೊಂಡಿರಬೇಕು.

ವಿಧಾನಸಭೆಯ ಸಭಾಪತಿಯಾದ ಮೇಲೆ ಸದನದಲ್ಲಿ ಶಾಸಕರು ಅಂಗಿ ಬಿಚ್ಚಿದರೆ, ಅಂಗಿ ಹರಿದುಕೊಂಡರೆ “ಗರಮ್” ಆಗದೆ ಸ್ಥಿತಪ್ರಜ್ಞನಂತೆ ವರ್ತಿಸಿಕೊಂಡಿರಬೇಕು.

ವಿಧಾನಸಭೆಯ ಸಭಾಪತಿಯಾದ ಮೇಲೆ ಸದನದಲ್ಲಿ ಶಾಸಕರು ಅದೇನೇ ಅಧ್ವಾನ, ಎಡವಟ್ಟು, ಅತಿರೇಕಗಳನ್ನು ಮಾಡಿದರೆ ಕಂಡೂ ಕಾಣದಂತಿರಬೇಕು ಮತ್ತು ಕೇಳಿಸಿಕೊಂಡರೂ ಕೇಳಿಸಿಕೊಳ್ಳದಂತಿರಬೇಕು.

ಶಾಸಕರುಗಳು ಕೂಗುತ್ತ, ಕಿರುಚಾಡುತ್ತ, ತೂರಾಡುತ್ತ ಸದನದ ಬಾವಿಗಿಳಿದು “ಧಿಕ್ಕಾರ, ಧಿಕ್ಕಾರ” ಎಂದು ಆವೇಶ, ಆಕ್ರೋಶವನ್ನು ವ್ಯಕ್ತಪಡಿಸುವುದನ್ನು ನೋಡುತ್ತ ಮಹಾಭಾರತದ ಭೀಷ್ಮ, ದ್ರೋಣರ ಹಾಗೆ ಸುಮ್ಮನಿರಬೇಕು.

ವಿಧಾನಸಭೆಯ ಸಭಾಪತಿಯಾದ ಮೇಲೆ ಮಾರ್ಷಲ್‌ಗಳು ತಡೆದರೂ ಅವರನ್ನು ಮೀರಿ ಸದನದಲ್ಲಿ ಒಳಗೆ ನುಗ್ಗಿಬರುವ ಶಾಸಕರನ್ನು ಸಹಿಸಿಕೊಳ್ಳಬೇಕು. ಹಾಗೆ ಬರುವುದಕ್ಕೆ ಸಹಕರಿಸುವ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿಗಳನ್ನು, ಮಾಜಿ ಸಭಾಪತಿಗಳನ್ನು ಸಹಿಸಿಕೊಳ್ಳಲುಬೇಕು.

ವಿಧಾನಸಭೆಯ ಸಭಾಪತಿಯಾದ ಮೇಲೆ ಸದನವನ್ನು ಮ್ಯಾಜೆಸ್ಟಿಕ್ ಸರ್ಕಲ್ ಮತ್ತು ಕಲಾಸಿಪಾಳ್ಯ ಮಾಡುವ ಅತಿರೇಕದ ಅತಿರೇಕವೀರ ಶಾಸಕರನ್ನು ಉಗುಳು ನುಂಗಿ ಸಹಿಸಿಕೊಂಡಿರಬೇಕು.

ವಿಧಾನಸಭೆಯ ಸಭಾಪತಿಯಾದ ಮೇಲೆ ಸದನದಲ್ಲಿ ಏನೇ ಆದರೂ ಏನೇ ಹೋದರೂ ಜಾಣಕುರುಡು, ಜಾಣಕಿವುಡುಗಳಿಗೆ ಶರಣುಹೋಗಿ ಸಮಾಧಾನಿಯಾಗಿರಬೇಕು. ಏನು ಮಾಡುವುದು, ಸಭಾಪತಿಗಳೇ, ಈ ರೀತಿಯ ಜನಪ್ರತಿನಿಧಿಗಳನ್ನು ಮತ್ತು ಶಾಸಕರನ್ನು ಸಹಿಸಿಕೊಳ್ಳುವದು ನಿಮಗಷ್ಟೇ ಅಲ್ಲ, ಅವರನ್ನು ಆಯ್ಕೆಮಾಡಿ ಕಳುಹಿಸಿದ ಜನಗಳಿಗೂ ಕೂಡ ಅನಿವಾರ್ಯವಾಗಿದೆ. ಗದ್ದಲ, ಗಲಾಟೆ ಮಾಡುವಾಗ ಬರೀ ಪಕ್ಷಾತೀತವಾಗಿ ಮಾತ್ರ ಅಲ್ಲ, ಸಿದ್ಧಾಂತಾತೀತವಾಗಿ ಮತ್ತು ಮೌಲ್ಯಾತೀತವಾಗಿ ವರ್ತಿಸುವುದು ನಮ್ಮ ಜನಗಳಿಗೆ ಅಭ್ಯಾಸವಾಗಿ ಹೋಗಿದೆ. ಗಲಾಟೆ ಮಾಡುವ ಜನರನ್ನು ನಿಯಂತ್ರಿಸಲು ಪೋಲಿಸರು ಸಾಕು.

ಶಾಸಕರನ್ನು ನಿಯಂತ್ರಿಸಲು ಮಾರ್ಷಲ್‌ಗಳು ಬೇಕು ಮುಂದಿನ ದಿನಗಳಲ್ಲಿ, ಶಾಸಕರುಗಳನ್ನು ನಿಯಂತ್ರಿಸಲು ಆರ್ಮಿಯೇ ಬರಬೇಕಾಗಬಹುದೇನೋ. ಅಂಥ ದಿನಗಳನ್ನು ನೋಡುವ ಕಾಲ ಇನ್ನು ಬಹಳ ದೂರವಿಲ್ಲ. ಅಂಥೊಂದು ಕಾಲ ತುಂಬ ವೇಗವಾಗಿ ಬರುತ್ತಲಿದೆ. ಈ ನಮ್ಮ ಕಣ್ಣುಗಳಿಂದ ಅಂಥ ವಿಕೃತ ಪರಿಸ್ಥಿತಿಯನ್ನು ಬಹುಬೇಗನೇ ನೋಡಬೇಕಾಗಿ ಬರಬಹುದೇನೋ

ಶಿವಾನಂದ ಶಿವಾಚಾರ್ಯರು. ಹಿರೇಮಠ ತುಮಕೂರು

Leave a Reply

Your email address will not be published. Required fields are marked *

error: Content is protected !!