ಶಾಸಕನಾದ್ರೆ ಮಧುಗಿರಿ ಜಿಲ್ಲಾ ಕೇಂದ್ರ ಮಾಡಲು ಸಿದ್ದ : ಕೆ.ಎನ್.ರಾಜಣ್ಣ

ಮಧುಗಿರಿ : ನಾನು ಶಾಸಕನಾಗಿ ಆಯ್ಕೆಯಾದರೆ ಜಿಲ್ಲಾಕೇಂದ್ರ, ತಾಲ್ಲೂಕಿಗೆ ಎತ್ತಿನಹೊಳೆ ಯೋಜನೆ ಮೂಲಕ 54 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಅಮರವತಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕನಕ ಕುರುಬರ ಸಂಘದ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಮಾರ್ಗದರ್ಶನ ಚಿಂತನೆ ಮತ್ತು ಸಮಾಜಮುಖಿ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿ, ಜನರ ಕಷ್ಟ ತಿಳಿದವರು ಅಧಿಕಾರಕ್ಕೆ ಬಂದಾಗ ಜನರ ಸಮಸ್ಯೆಗಳನ್ನು ನೀಗಿಸಲು ಸಾಧ್ಯ ಎಂದರು.

ನಾನು ಶಾಸಕನಾಗಿದ್ದ ಕ್ಷೇತ್ರದಲ್ಲಿ 16 ಸಾವಿರ ಮನೆಗಳನ್ನು ನಿರ್ಮಿಸಿ ಬಡವರ್ಗದ ಜನರಿಗೆ ಅನುಕೂಲ ಮಾಡಿದ್ದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಒಂದು ಮನೆಯೂ ನಿರ್ಮಾಣವಾಗಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣ. ಆದರೆ ಅವರನ್ನು ಮೂಲೆಗುಂಪು ಮಾಡಿ ಕಣ್ಣೀರು ಹಾಕಿಸಿದ ಪಕ್ಷಕ್ಕೆ ನೀವು ಮತ ಹಾಕುತ್ತೀರಾ ಎಂದು ಜನರನ್ನು ಪ್ರಶ್ನಿಸಿದರು.

ವಿಧಾನ ಪರಿಷತ್ತು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸದೆ ನನ್ನ ಸೋಲಿಗೆ ಕಾರಣರಾದವರನ್ನು ಸೋಲಿಸಿ ಎಂದು ಜಿಲ್ಲೆಯ ತುಂಬಾ ನನ್ನ ವಿರುದ್ದ ಅಪಪ್ರಚಾರ ಮಾಡಿದರು. ಅವರ ಸೋಲಿಗೆ ಆವರ ಪಕ್ಷದ ಶಾಸಕರೇ ಕಾರಣ ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ ಅನ್ನಭಾಗ್ಯ ಯೋಜನೆ ಕೋವಿಡ್ ಸಂದರ್ಭದಲ್ಲಿ ಎಲ್ಲಾ ವರ್ಗದ ಬಡ ಜನರಿಗೆ ವರದಾನವಾಯಿತು ಎಂದರು.

ನಾನು ಶಾಸಕನಾಗಿ ಆಯ್ಕೆಯಾದರೆ ಜಿಲ್ಲಾಕೇಂದ್ರ, ತಾಲ್ಲೂಕಿಗೆ ಎತ್ತಿನಹೊಳೆ ಯೋಜನೆ ಮೂಲಕ 54 ಕೆರೆಗಳಿಗೆ ನೀರು ಹರಿಸಲಾಗುವುದು ಹಾಗೂ ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಅಮರಾವತಿ ಗ್ರಾಮದಲ್ಲಿ ಕನಕ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವಿತ್ರಮ್ಮ ಡಿ.ಎಚ್.ನಾಗರಾಜು , ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ. ಆರ್. ಸುರೇಶ್, ರಾಜ್ಯ ಕುರುಬರ ಸಂಘದ ನಿರ್ದೇಶಕ ಟಿ. ಇ. ರಘುರಾಮ್, ಮುಖಂಡರಾದ ರಾಜು ಎಂ. ಶಾಂತಾರಾಮ್ ಎಂಪಿ ಮರಿಯಣ್ಣ , ಅಮರಾವತಿ ದಾಸೇಗೌಡ, ಗೋವಿಂದರಾಜು, ಎಚ್.ಟಿ. ತಿಮ್ಮರಾಜು ಟಿವಿಎಸ್ ಮಂಜು , ಎಸ್.ಆರ್. ಮಂಜುನಾಥ್ ಗರಣಿ ರಾಮಾಂಜಿ ನಾಗರಾಜು ನಾಗರಾಜು ಇದ್ದರು.

error: Content is protected !!