ತುರುವೇಕೆರೆ:ಮುಜರಾಯಿ “ದೇವಾಲಯಕ್ಕೆ” ಹಾಗೂ “ಅರ್ಚಕರಿಗೆ” ಸೂಕ್ತ ರಕ್ಷಣೆ ನೀಡಿ!

ತುರುವೇಕೆರೆ: ಮಾಯಸಂದ್ರ ಹೋಬಳಿಯ ರಾಮಸಾಗರ ಗ್ರಾಮದ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಪುರಾತನ ಪ್ರಸಿದ್ಧ “ಶ್ರೀ ವರದರಾಜಸ್ವಾಮಿ” ದೇವಾಲಯಕ್ಕೆ ಹಾಗೂ ದೇವಾಲಯದ ಅರ್ಚಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳೀಯ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರು.

ಮಾಯಸಂದ್ರ ಗ್ರಾಮದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಎಂ.ಎನ್, ಸುಬ್ರಹ್ಮಣ್ಯ ಮಾತನಾಡಿ ರಾಮಸಾಗರ ಗ್ರಾಮದ ಶ್ರೀ ವರದರಾಜ ಸ್ವಾಮಿ ದೇವಸ್ಥಾನವು ಪುರಾತನ ಇತಿಹಾಸವುಳ್ಳ ದೇವಾಲಯವಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದೆ. ಹೀಗಿರುವಾಗ ದೇವಾಲಯದಲ್ಲಿ ಹಲವು ಬಾರಿ ಕಳ್ಳತನಗಳಾಗಿವೆ.ಅಲ್ಲದೇ ಇತ್ತೀಚಿನ ದಿನಗಳಲ್ಲಿ ಅರ್ಚಕರ ಮೇಲೆ ಕೆಲ ಅಪರಿಚಿತರಿಂದ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಕೆಲ ಭಕ್ತರು ದೇವರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಅವ್ಯವಹಾರಗಳನ್ನು ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಅನುಮಾನವಿದ್ದು ಗೊಂದಲವಾಗಿದೆ. ಹಿಂದೆಯೂ ಸಹಾ ದೇವಸ್ಥಾನದ ಹೆಸರಿನಲ್ಲಿ ಕೆಲವು ಅವ್ಯವಹಾರಗಳು ನಡೆದಿದ್ದು, ಹಳೆಯ ಪುರಾತನ ವಸ್ತುಗಳಿಗೆ ಹಾನಿ ಮಾಡಿರುವುದು, ಅಪರಿಚಿತರು ಖಾಸಗಿ ಕೃತವಾಗಿ ಪ್ರವೇಶಿಸುವುದು, ಖಾಸಗಿ ಸಮಿತಿಗಳನ್ನು ರಚಿಸಿಕೊಂಡಿರುವುದು ಕಂಡುಬಂದಿವೆ. ಈ ಸಂಬಂಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಬಾರಿಯ ಅರ್ಚಕರ ದೂರಿನನ್ವಯ ತಹಶಿಲ್ದಾರರವರು ದೇವಾಲಯದ ಆವರಣಕ್ಕೆ ಸೂಚನಾಫಲಕ ಅಳವಡಿಸಿರುವುದು ಉತ್ತಮವಾಗಿದೆ. ಕೂಡಲೇ ಮುಂದೆ ಇಂತಹ ಯಾವುದೇ ಅವ್ಯವಹಾರಗಳಿಗೆ ಅವಕಾಶ ನೀಡದೆ ಸಂಬಂಧಪಟ್ಟ ಸ್ಥಳೀಯ ತಹಶೀಲ್ದಾರ್ ಅವರು ದೇವಸ್ಥಾನಕ್ಕೆ ಹಾಗೂ ಅರ್ಚಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.

‌ಹಿರಿಯ ಮುಖಂಡರಾದ ರಂಗರಾಜು ಮಾತನಾಡಿ, ನೂರಾರು ವರ್ಷ ಇತಿಹಾಸವುಳ್ಳ ಶ್ರೀ ವರದರಾಜ ಸ್ವಾಮಿ ದೇವಸ್ಥಾನಕ್ಕೆ ಸೂಕ್ತ ಭದ್ರತೆಯ ಅವಶ್ಯಕತೆ ಇದೇ. ದೇವಸ್ಥಾನಕ್ಕೆ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಬೇಕು. ಪುರಾತನ ದೇವಸ್ಥಾನವಾದ ರಿಂದ ಯಾರು ಸಹ ಅತಿಕ್ರಮ ಪ್ರವೇಶಸದೆ ಅಲ್ಲಿನ ಅರ್ಚಕರಿಗೆ ಯಾವುದೇ ತೊಂದರೆ ನೀಡದಂತೆ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯ ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಒಟ್ಟಾರೆ ಸ್ಥಳೀಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಪುರಾತನ ಪ್ರಸಿದ್ಧ ದೇವಸ್ಥಾನಕ್ಕೆ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ದಿ. 22-03-2021ರಂದು ಲಿಖಿತ ರೂಪದಲ್ಲಿ ತಹಶೀಲ್ದಾರರವರಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಯುವ ಮುಖಂಡರಾದ ಶ್ರೀನಿವಾಸಮೂರ್ತಿ, ಬಾಲು ಮೋಹನ್, ಕೆಂಪನಂಜಸ್ವಾಮಿ ಅರ್ಚಕರು, ಡಿ ನಂಜಪ್ಪ, ರಾಮಸಾಗರ ಗ್ರಾಮದ ಹಿರಿಯ ಮುಖಂಡರು ಗೋವಿಂದಪ್ಪ, ವೆಂಕಟಪ್ಪ, ರಾಜಣ್ಣ, ಗಿರೀಶ್, ಪುಟ್ಟಸ್ವಾಮಿ, ಹರೀಶ್, ಸುರೇಶ್, ವೆಂಕಟೇಶ್, ದಾಸೀಹಳ್ಳಿಪಾಳ್ಯ ರಂಗರಾಜು, ಸ್ಥಳೀಯ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!