ಪೆಟ್ರೋಲ್,ಡಿಸೇಲ್ ದುಬಾರಿ: ಜಟಕಾ ಬಂಡಿಯಲ್ಲಿ ಪ್ರತಿಭಟನಾ ಮೆರವಣಿಗೆ.

ತುಮಕೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಸುತ್ತಿರುವುದನ್ನು ವಿರೋಧಿಸಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಉಮಾಶಂಕರ್ ಕೆ. (ಉಮೇಶ್) ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಜಟಕಾ ಬಂಡಿಯಲ್ಲಿ ವಿನೂತನವಾಗಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಜಟಕಾ ಬಂಡಿ ಏರಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನುದ್ಧೇಶಿಸಿ ಮಾತನಾಡಿದ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್ ಕೆ., ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿ ಜನರ ಬದುಕಿಗೆ ಕೊಳ್ಳೆಹೊಡೆಯುತ್ತಿದೆ ಎಂದು ಆರೋಪಿಸಿದರು.

ಜನಸಾಮಾನ್ಯರಿಗೆ ಅಗತ್ಯವಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಸಿ ಗಾಯದ ಮೇಲೆ ಬರೆ ಹಾಕಿದೆ. ತೈಲಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತು ಬೆಲೆ ಹೆಚ್ಚಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಸರ್ಕಾರ ಕೂಡಲೇ ತೈಲಬೆಲೆ ಏರಿಕೆ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಕೊರೊನಾ ಮಹಾಮಾರಿ ಬಂದು ಜನಸಾಮಾನ್ಯರಿಗೆ ಬಹಳ ಕಷ್ಟವಾಗಿದೆ. ದುರ್ಗಮ ಸಂದರ್ಭದಲ್ಲಿ ಸರ್ಕಾರ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡುವುದು, ಅಡುಗೆ ಅನಿಲದ ಬೆಲೆ ಏರಿಸಿರುವುದು ಖಂಡನೀಯ. ಕೂಡಲೇ ಬೆಲೆ ಇಳಿಸಬೇಕು. ಜನಸಾಮಾನ್ಯರಿಗೆ ಬದುಕುವ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲದ ಕಾರಣ ಅಂತರಾಷ್ಟ್ರೀಯ ಮಟ್ಟದಲ್ಲಿ ಖಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ನಿರಂತರವಾಗಿ ಇಂದನ ಬೆಲೆ ಮತ್ತು ದಿನನಿತ್ಯದ ಸಾಮಾಗ್ರಿಗಳ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಜನರು ಈಗಾಗಲೇ ಕೊರೋನ ಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡಿದ್ದು, ಇಂತಹ ಸಂದರ್ಭದಲ್ಲಿ ತೈಲ ಬೆಲೆ ಹಾಗೂ ಅಡುಗೆ ಅನಿಲ ಬೆಲೆಗಳು, ದಿನಸಿ ಪದಾರ್ಥಗಳ ಬೆಲೆಗಳು ತುಂಬಾ ಹೆಚ್ಚಾಗಿರುವುದರಿಂದ ಜನಸಾಮಾನ್ಯರು, ಬಡವರು, ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದೇ ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಜನರ ಸಮಸ್ಯೆಗಳಿಗೆ ಆದಷ್ಟು ಬೇಗ ಸ್ಪಂಧಿಸಿ ತೈಲ ಬೆಲೆ ಮತ್ತು ಅಡುಗೆ ಅನಿಲದ ಬೆಲೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

ಕೂಡಲೇ ದರ ಇಳಿಸುವಂತೆ ಆಗ್ರಹಿಸಿದ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು, ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, (ಜೆ.ಪಿ), ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಸ್.ವಿ.ಗೀತಾ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷರಾದ ಮಕ್ದುಂ, ಗಿರೀಶ್, ಪ್ರವೀಣ್ ಸಿಂದೆ, ಯುವ ಘಟಕದ ಅಧ್ಯಕ್ಷ ಶ್ರೀಧರ್, ಜಿಲ್ಲಾ ಜಂಟಿ ಕಾರ್ಯದರ್ಶಿ ಇಮ್ರಾನ್, ಕೆ.ಪಿ.ರಾಘವೇಂದ್ರ, ವೆಂಕಿ, ಮಧುಸೂಧನ್, ಮಹಮ್ಮದ್ ಯೂನಸ್, ನಾಗೇಂದ್ರಪ್ಪ, ಇಮ್ರಾನ್, ಸಚ್ಚಿನ್, ಶಿಲ್ಪ, ಶೊಹಿಬ್ ಉದ್ಧೀನ್, ಷರೀಫ್, ಟಿ.ಎಸ್. ಬಾಲಾಜಿ, ನಯಾಜ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!