ಸರ್ಕಾರದ ವಿರುದ್ದ ಸಿಡದೆದ್ದ ನೇಕಾರ: ವಿವಿದ ಬೇಡಿಕೆ ಈಡೇರಿಸುವಂತೆ ಒತ್ತಾಯ.

 ತುಮಕೂರು: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇವಾಂಗ ಜಗದ್ಗುರುಗಳಾದ ಶ್ರೀ ದಯಾನಂದಪುರಿ ಸ್ವಾಮೀಜಿಗಳ ಆದೇಶದಂತೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆ ಭಾಗವಾಗಿ ತುಮಕೂರು ಜಿಲ್ಲಾ ದೇವಾಂಗ ಸಂಘದ (ರಿ.) ವತಿಯಿಂದಲೂ ನಗರದ ಟೌನ್ಹಾಲ್ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಟೌನ್ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಜಿಲ್ಲಾ ದೇವಾಂಗ ಸಂಘದ ಪದಾಧಿಕಾರಿಗಳು, ನೇಕಾರರ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಪ್ರೊ.ಆರ್.ರಾಮಕೃಷ್ಣಯ್ಯ, ರಾಜ್ಯದಲ್ಲಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇವಾಂಗ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಕಳೆದ ಹಲವು ವರ್ಷಗಳಿಂದಲೂ ದೇವಾಂಗ ನೇಕಾರರು ನೈಸರ್ಗಿಕ ಪ್ರಕೋಪಗಳಿಂದ ನಷ್ಟಕ್ಕೊಳಗಾಗಿ ಜೀವನ ನಡೆಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್೧೯ನಿಂದ ಕಳೆದ ವರ್ಷ ನೇಕಾರಿಕೆ ಸಂಪೂರ್ಣವಾಗಿ ನಿಂತು ಹೋಗಿದ್ದರಿಂದ ನೇಕಾರರು  ತುಂಬಾ ತೊಂದರೆಗೊಳಗಾಗಿದ್ದಾರೆ ಎಂದರು.

ದೇವಾಂಗ ಜನಾಂಗದ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಆಗದೇ ತುಂಬಾ ದುಸ್ಥರವಾಗಿದೆ. ಕೂಲಿ ಕೆಲಸ ಮಾಡಿ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಸರ್ಕಾರ ಘೋಷಣೆ ಮಾಡಿದ ಪರಿಹಾರವೂ ಬಡ ನೇಕಾರರಿಗೆ ತಲುಪಿಲ್ಲ, ಜೊತೆಗೆ ದೇವಾಂಗ ಸಮಾಜಕ್ಕೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿಲ್ಲ ಎಂದರು.

ಜನರಿಗೆ ಅನ್ನ ನೀಡುವ ರೈತ ಹಾಗೂ ಮಾನ ಮುಚ್ಚಲು ಬಟ್ಟೆ ನೇಯ್ಗೆ ಮಾಡುವ ದೇವಾಂಗ ನೇಕಾರ ಸರ್ಕಾರದ ಎರಡು ಕಣ್ಣುಗಳಿದ್ದಂತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುತ್ತಾ ಬಂದಿದ್ದರೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿಂದೆ ಹಲವಾರು ಭಾರಿ ನಮ್ಮ ಸಮುದಾಯಕ್ಕೆ ಸಹಾಯ ಮಾಡಿದ್ದರೂ ಸಹ ಅದು ತಲುಪುವಂತಹ ಬಡ ನೇಕಾರರಿಗೆ ತಲುಪಿಲ್ಲ, ಸರ್ಕಾರ ಕೊಟ್ಟಿರುವ ಸೌಲಭ್ಯಗಳು ಸಹ ತೃಣ ಸಮಾನವಾಗಿದೆ. ಉತ್ತರ ಕರ್ನಾಟಕ ನೇಕಾರರು ಮತ್ತು ದಕ್ಷಿಣ ಕರ್ನಾಟಕದ ನೇಕಾರರಲ್ಲಿ ಸುಮಾರು ೭೦ ರಷ್ಟು ಬಡವರೇ ಇದ್ದಾರೆ. ಅವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೇಕಾರರಿಗೆ ಆರ್ಥಿಕ ಸಹಾಯವನ್ನು ಒದಗಿಸಿಕೊಡಬೇಕಿದೆ ಎಂದು ಒತ್ತಾಯಿಸಿದರು.

ಮುಂಬರುವ ರಾಜ್ಯ ಬಜೆಟ್ನಲ್ಲಿ ದೇವಾಂಗ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕು, ದೇವಾಂಗ ಜನಾಂಗ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಪ್ರಸ್ತುತ ಮುಂಗಡ ಪತ್ರದಲ್ಲಿ ೧೦೦ ಕೋಟಿ ರೂ. ಅನುದಾನ ಮೀಸಲಿಡಬೇಕು, ಮಹಾರಾಷ್ಟ್ರ ಸರ್ಕಾರ ನೀಡಿರುವ ಶೇ. ರಷ್ಟು ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ಸೌಲಭ್ಯವನ್ನು ರಾಜ್ಯ ಸರ್ಕಾರವೂ ಸಹ ದೇವಾಂಗ ಸಮಾಜಕ್ಕೆ ನೀಡಬೇಕು, ತಮಿಳುನಾಡು ಸರ್ಕಾರ ನೀಡಿರುವಂತೆ ಕೈಮಗ್ಗ ಹಾಗೂ ನಾಲ್ಕು ವಿದ್ಯುತ್ ಚಾಲಿತ ಮಗ್ಗ ನಡೆಸುತ್ತಿರುವ ದೇವಾಂಗ ನೇಕಾರರಿಗೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ಕೊಟ್ಟು, ಉಚಿತ ವಿದ್ಯುತ್ ಸೌಲಭ್ಯ ಒದಗಿಸಬೇಕು, ನೇಕಾರರಿಗೆ ವಸತಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಬಡ ನೇಕಾರರ ಸಾಲಮನ್ನಾ ಯೋಜನೆಯನ್ನು ಸರಳೀಕರಣಗೊಳಿಸಿ ಅದರ ಸೌಲಭ್ಯ ಅವರಿಗೆ ದೊರೆಯುವಂತೆ ಮಾಡಬೇಕು ಹಾಗೂ ರಿಂದ ೧೦ ಲಕ್ಷದವರೆಗೆ ಬಡ್ಡೀರಹಿತ ಸಾಲ ಒದಗಿಸಬೇಕು, ದೇವರ ದಾಸಿಮಯ್ಯ ಜಯಂತಿಗೆ ಸರ್ಕಾರಿ ರಜೆಯನ್ನು ಘೋಷಿಸಬೇಕು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆಗೆ ಹಿಂದಿನ ಸರ್ಕಾರ ನೀಡುತ್ತಿದ್ದ ಹಣದ ದುಪ್ಪಟ್ಟನ್ನು ಕೊಟ್ಟು ದಾಸಿಮಯ್ಯ ಜಯಂತಿಯನ್ನು ಯಶಸ್ವಿಯಾಗಿ ಆಚರಿಸಲು ಸಹಾಯ ಮಾಡಬೇಕು ಎಂದು ಒತ್ತಾಯಿಸಿದ ಅವರು, ಎಲ್ಲಾ ಬೇಡಿಕೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ದೇವಾಂಗ ಸಂಘದ ಗೌರವಾಧ್ಯಕ್ಷರಾದ ಡಾ.ಎಸ್.ಹೆಚ್.ಕೇಶವಮೂರ್ತಿ, ಕಾರ್ಯದರ್ಶಿ ಟಿ.ರೇವಣ್ಣಕುಮಾರ್, ಕಲ್ಲೂರು ಗಿರೀಶ್, ಬರಪ್ಪ, ಕೋಟನಾಯಕನಹಳ್ಳಿಯ ಬರಪ್ಪ, ಮುನಿಯೂರಿನ ದೇವಾಂಗದ ಅಧ್ಯಕ್ಷರಾದ ರಾಮಸ್ವಾಮಿ, ರಾಮಚಂದ್ರ, ಕಮಲಮ್ಮ, ಬಿ.ಎಲ್.ರವೀಂದ್ರ, ಗುಡಿಗೌಡರು, ಕಲ್ಲೂರಿನ ದೇವಾಂಗ ಸಂಘದ ಎಲ್ಲಾ ಪದಾಧಿಕಾರಿಗಳು, ಹುಳಿಯಾರಿನ ಅನಂತಕುಮಾರ್, ಬರಪ್ಪ ಸೇರಿದಂತೆ ದೇವಾಂಗ ನೇಕಾರರ ಸಮುದಾಯದ ಎಲ್ಲಾ ಮುಖಂಡರು ಭಾಗವಹಿಸಿದ್ದರು.

error: Content is protected !!