ಬಜೆಟ್‌ನಲ್ಲಿ ಪರಿಶಿಷ್ಟರ ಅಭಿವೃದ್ಧಿ ಅನುದಾನ ಕಡಿತ: ತುಮಕೂರಿಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದಿಂದ ಪ್ರತಿಭಟನೆ.

ತುಮಕೂರು: ದಲಿತರ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಹಣಕ್ಕೆ ಕತ್ತರಿ ಹಾಕಿರುವುದು ದುರದೃಷ್ಟಕರ ಎಂದು ತಾಲ್ಲೂಕು ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೂಳೂರಿನಲ್ಲಿ ಬಜೆಟ್ನಲ್ಲಿ ಪರಿಶಿಷ್ಟರ ಅಭಿವೃದ್ಧಿ ಅನುದಾನವನ್ನು ಕಡಿತಗೊಳಿಸಿರುವುದಕ್ಕೆ ವಿರೋಧಿಸಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಒಳ ಮೀಸಲಾತಿ ಸೇರಿದಂತೆ ದಲಿತರ ಅಭಿವೃದ್ಧಿಗೆ ಭರಪೂರ ಭರವಸೆಗಳನ್ನು ನೀಡಿದ್ದ ಬಿಜೆಪಿ ಇಂದು ಅನುದಾನವನ್ನು ನಿಗದಿಪಡಿಸುವುದರಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮುಂದುವರೆದ ಜಾತಿಗಳಿಗೆ ಒಂದು ಸಾವಿರ ಕೋಟಿ ಅನುದಾನ ನೀಡಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಕೇವಲ ೫೦೦ ಕೋಟಿ ಅನುದಾನ ನೀಡುವ ಮೂಲಕ ಬಿಎಸ್ವೈ ದಲಿತರಿಗೆ ಅನ್ಯಾಯವನ್ನು ಮಾಡಿದ್ದಾರೆ ಎಂದು ದೂರಿದರು.

ಹಿಂದೆ ಇದ್ದ ಸಮ್ಮಿಶ್ರವಾಗಲಿ, ಕಾಂಗ್ರೆಸ್ ಸರ್ಕಾರವಾಗಲಿ ದಲಿತರ ಅಭಿವೃದ್ಧಿಗೆ ಅನುದಾನವನ್ನು ನೀಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿರುವ ಬಹುಸಂಖ್ಯಾತ ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಕನಿಷ್ಠ ಅನುದಾನವನ್ನು ನೀಡುವ ಮೂಲಕ ಮಾಡಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಶಾಸಕರು, ಪರಿಶಿಷ್ಟ ಅನುದಾನವನ್ನು ಕಡಿತಗೊಳಿಸಿರುವುದಕ್ಕೆ ಚಕಾರ ಎತ್ತದೇ, ಮೌನವಹಿಸಿರುವುದನ್ನು ನೋಡಿದರೆ, ಬಿಜೆಪಿಯ ಪರಿಶಿಷ್ಟ ಜಾತಿ, ಪಂಗಡದ ಶಾಸಕರು, ಸಚಿವರು ಅಸಹಾ ಯಕರಾಗಿದ್ದಾರೆ, ಸಮುದಾಯದ ಅಭಿವೃದ್ಧಿಯ ಅನುದಾನ ಕಡಿತಗೊಳಿಸಿದರು ತೆಪ್ಪಗಿರುವ ಪರಿಶಿಷ್ಟರ ಹೆಸರಿನಲ್ಲಿ ಶಾಸಕರು, ಸಚಿವರಾಗಿರುವರು, ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಲು ಆಗದೇ ಇದ್ದರೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಸಿಂಡಿಕೇಟ್ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್ ಮಾತನಾಡಿ ಸಂವಿಧಾನ ಜಾರಿಯಾದ ನಂತರ ಬಂದ ಲಜ್ಜೆಗೇಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ, ಜನರ ಕಲ್ಯಾಣಕ್ಕಾಗಿ ಮಂಡಿಸುವ ಬಜೆಟ್ನಲ್ಲಿ ಸಾಮಾಜಿಕ ನ್ಯಾಯವನ್ನು ಕಾಪಾಡಲು ವಿಫಲವಾಗಿದ್ದು, ಅಹಿಂದ ವರ್ಗಗಳಿಗೆ ನೇಣು ಹಾಕುವಂತೆ ಆಡಳಿತವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮಾಜದಲ್ಲಿ ಯಾವುದೇ ಉನ್ನತ ಹುದ್ದೆಯನ್ನು ಪಡೆದರು ಕೊನೆಗೆ ಜಾತಿ ದಲಿತರಿಗೆ ಅಂಟುಕೊಂಡಿದೆ, ದಲಿತರು ಆರ್ಥಿಕವಾಗಿ ಸಬಲವಾಗಬೇಕಾದರೆ, ಆರ್ಥಿಕ ಸಮಾನತೆಯ ಬಜೆಟ್ ಮಂಡಿಸಬೇಕು ಆದರೆ ಬಿಎಸ್ವೈ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರೋಧವಾಗಿ ಆಡಳಿತ ನಡೆಸುತ್ತಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿದ್ದಾರೋ ಗೊತ್ತಿಲ್ಲ, ಸ್ವಾಭಿಮಾನವಿಲ್ಲದ ದಲಿತ, ಹಿಂದುಳಿದ ಶಾಸಕ ಮೌನವಹಿಸಿದ್ದಾರೆ. ಅಹಿಂದ ವರ್ಗಕ್ಕೆ ಜಾತಿ ಸಂಖ್ಯೆ ಆಧಾರದ ಮೇಲಾದರೂ ಅನುದಾನ ನೀಡದ ಬಜೆಟ್ ದಲಿತರಿಗೆ ಮಾರಕವಾಗಿದೆ ಎಂದರು.

ಅಂಬೇಡ್ಕರ್ ಅವರು ಹೇಳಿದಂತೆ ಸ್ವಾಭಿಮಾನವಿಲ್ಲದೇ ಬದುಕಬಾರದು, ಹೋರಾಟದ ಹಕ್ಕು, ಮತದಾನದ ಹಕ್ಕು ನೀಡಿದ್ದಾರೆ, ಅನುದಾನ ನೀಡದೇ ಇರುವುದರ ವಿರುದ್ಧ ಹೋರಾಟ ಮಾಡಬೇಕಾಗಿದೆ, ಸಂವಿಧಾನಾತ್ಮಕವಾಗಿ ನೀಡಿರುವ ಮತದಾನದ ಹಕ್ಕನ್ನು ಅಚ್ಛೇದಿನ್ ನೋಡಿ ಹಾಕಿರುವ ದಲಿತರು, ಭ್ರಷ್ಟಾಚಾರಿ, ದಲಿತ ವಿರೋಧಿ ಸರ್ಕಾರದ ವಿರುದ್ಧ ಚಲಾಯಿಸಲಿದ್ದಾರೆ ಎಂದು ಹೇಳಿದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ ಅಹಿಂದ ವರ್ಗವನ್ನು ಬಜೆಟ್ನಲ್ಲಿ ಕಡೆಗಣಿಸಿರುವುದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ, ಸಾಮಾಜಿಕ ನ್ಯಾಯಕ್ಕೆ ವಿರೋಧಿಯಾಗಿರುವ ಬಜೆಟ್ನಲ್ಲಿ ಕೆಲ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಸ್ವಾಗಾತಾರ್ಹ ಆದರೆ ಅಹಿಂದ ವರ್ಗವನ್ನು ಕಡೆಗಣಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ನರುಗನಹಳ್ಳಿ ವಿಜಯಕುಮಾರ್, ಜಹೀರ್ ಅಬ್ಬಾಸ್, ಗೂಳೂರು ಗ್ರಾ.ಪಂ.ಅಧ್ಯಕ್ಷ ಕೃಷ್ಣೇಗೌಡ, ಕೆಂಪಹನುಮಣ್ಣ, ಕರೆ ರಂಗಪ್ಪ, ಚಲುವಣ್ಣ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!