ರೈತ ಸಂಘದಿಂದ ಮಾ.17 ರಂದು ತಿಪಟೂರು ಪೊಲೀಸರ ವಿರುದ್ದ ಪ್ರತಿಭಟನೆ

ತುಮಕೂರು: ತಿಪಟೂರು ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡದೆ, ಪೊಲೀಸ್ ಬಲ ಬಳಸಿ, ಕಾಮಗಾರಿ ನಿರ್ವಹಿಸಲು ಹೊರಟಿರುವ ಗುತ್ತಿಗೆ ಕಂಪನಿ ಹಾಗೂ ಇವರಿಗೆ ಬೆಂಬಲವಾಗಿ ನಿಂತಿರುವ ಪೊಲೀಸ್ ಇಲಾಖೆಯ ವಿರುದ್ದ ಮಾರ್ಚ್ 17 ರ ಬುಧವಾರ ಬೆಳಗ್ಗೆ 11 ಗಂಟೆ ತಿಪಟೂರಿನ ಕೋಡಿ ಸರ್ಕಲ್‌ನಿಂದ ಎ.ಸಿ.ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರೈತರ ಭೂಮಿಗೆ ಪರಿಹಾರ ನೀಡದೆ,ಅತಿಕ್ರಮ ಪ್ರವೇಶ ಮಾಡಿರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತರು ನೀಡಿದ ದೂರಗಳನ್ನು ದಾಖಲಿಸಿಕೊಳ್ಳದ ಪೊಲೀಸ್ ಇಲಾಖೆ, ದೂರ ನೀಡಿ, ಹೋರಾಟಕ್ಕೆ ನಿಂತ ರೈತರ ವಿರುದ್ದವೇ ಗಂಭೀರ ಕೇಸುಗಳನ್ನು ದಾಖಲಿಸುವ ಮೂಲಕ ದೌರ್ಜನ್ಯ ಎಸಗುತ್ತಿದೆ. ಇದನ್ನು ಖಂಡಿಸಿ, ರೈತರು, ಪ್ರಗತಿಪರರು, ದಲಿತರು ಹಾಗೂ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದರು.

ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ದೊರಕಿಸಿಕೊಡಬೇಕಾದ ಪೊಲೀಸರೇ ಗುತ್ತಿಗೆದಾರರ ಪರ ನಿಂತಿರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದ ಆನಂದಪಟೇಲ್,ರೈತರು ಅಭಿವೃದ್ದಿಯ ವಿರೋಧಿಗಳಲ್ಲ. ಆದರೆ ಇರುವ ಅರ್ಧ, ಒಂದು ಎಕರೆ ಭೂಮಿಗೆ ಪರಿಹಾರವನ್ನು ನೀಡದೆ ಕಾಮಗಾರಿ ಮುಗಿಸಲು ಮುಂದಾದರೆ,ನಾವು ಯಾರನ್ನು ನ್ಯಾಯ ಕೇಳಬೇಕು ಎಂಬುದೇ ತಿಳಿಯದಾಗಿದೆ.ಈ ಸಮಸ್ಯೆ ಪರಿಹರಿಸಬೇಕಾದ ಕಂದಾಯ ಇಲಾಖೆಯಾಗಲಿ, ಭೂಸ್ವಾಧೀನ ಇಲಾಖೆಯ ಅಧಿಕಾರಿಗಳಾಗಲಿ ಸ್ಥಳಕ್ಕೆ ಬರುತ್ತಿಲ್ಲ. ಬದಲಾಗಿ ಪೊಲೀಸರೇ ಮುಂದೆ ನಿಂತು, ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಆಗುವ ಲಾಭವೇನು ಎಂಬ ಪ್ರಶ್ನೆಗಳು ಜನರಲ್ಲಿ ಮೂಡುತ್ತಿದೆ ಎಂದು ಆನಂದಪಟೇಲ್ ತಿಳಿಸಿದರು.

ತುಮಕೂರು ಜಿಲ್ಲೆಯಲ್ಲಿ ಎತ್ತಿನಹೊಳೆ,ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ, ನೀರಾವರಿ ಯೋಜನೆಗಳ ನಡೆಯುತ್ತಿವೆ. ತಿಪಟೂರು ತಾಲೂಕಿನಲ್ಲಿ ಸುಮಾರು 1200 ಎಕರೆ ಭೂಮಿಯನ್ನು ಎತ್ತಿನಹೊಳೆ ಕಾಮಗಾರಿಗೆ ವಶಪಡಿಸಿಕೊಂಡು ಕಾಮಗಾರಿಪೂರ್ಣ ಗೊಂಡಿದೆ. ಪರಿಹಾರ ನೀಡಿಲ್ಲ,ಒಂದು ಹನಿ ನೀರನ್ನು ತಾಲೂಕಿನ ಹಂಚಿಕೆ ಮಾಡಿಲ್ಲ.ಈ ರೀತಿ ತಾರತಮ್ಯ ಸರಿಯೇ ಎಂದು ಪ್ರಶ್ನಿಸಿದ ಅವರು,ಕಳೆದ ನಾಲ್ಕೈದು ವರ್ಷಗಳಿಂದ ಸರಕಾರದ ಈ ಧೋರಣೆ ವಿರುದ್ದ ಹೋರಾಟ ನಡೆಸುತ್ತಾ ಸರಕಾರದ ಧೋರಣೆ ಖಂಡಿಸಿರುವ ರೈತರಾದ ಗೌರಿಶಂಕರ, ಭೈರೇಶ್ ಮತ್ತು ಜಯದೇವಪ್ಪ ಅವರುಗಳನ್ನು ಕೆ.ಬಿ.ಕ್ರಾಸ್‌ನಲ್ಲಿ ಬಂಧಿಸಿ, ನೊಣವಿನಕೆರೆ ಸ್ಟೇಷನ್‌ಗೆ ಕರೆದೊಯ್ಯದು ದಿನಗಟ್ಟಲೆ ಕೂಡಿಹಾಕಿ ಮಾನಸಿಕ  ಹಿಂಸೆ ನೀಡಲಾಗಿದೆ ಎಂದು ಆನಂದಪಟೇಲ್ ಆರೋಪಿಸಿದರು.

ಆರ್.ಕೆ.ಎಸ್‌ನ ಸ್ವಾಮಿ ಮಾತನಾಡಿ,ಪೊಲೀಸ್ ದಬ್ಬಾಳಿಕೆಯ ವಿರುದ್ದ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಮಾರ್ಚ್ 17 ರ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೋರಾಟಗಾರರ ದ್ವನಿ ಅಡಗಿಸಲು ಹೊರಟಿರುವ ಸರಕಾರ ಮತ್ತು ಪೊಲೀಸರ ಕ್ರಮದ ವಿರುದ್ದ ಎಲ್ಲರೂ ಒಂದಾಗಿ ಬೀದಿಗಿಳಿಯಲಿದ್ದೇವೆ ಎಂದರು.

ಸಿಪಿಐಎಂ ನ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಒಂದೆಡೆ ಸರಕಾರ ಶಾಸಕರು, ಸಂಸದರು, ಇತರೆ ಜನಪ್ರತಿನಿಧಿಗಳ ಮೇಲೆ ಹಾಕಿದ್ದ ಕೇಸುಗಳಿಗೆ ಬಿ.ರಿಪೋರ್ಟ್ ಹಾಕಿಸಿ ವಾಪಸ್ ಪಡೆಯುತ್ತಿದೆ.ಆದರೆ ಹೋರಾಟಗಾರರ ಮೇಲೆ ಇಲ್ಲಸಲ್ಲದ,ಕೆಲವು ಗಂಭೀರ ಕೇಸುಗಳನ್ನು ಹಾಕುವ ಮೂಲಕ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ಇದರ ವಿರುದ್ದದ ಮಾರ್ಚ ೧೭ರ ಹೋರಾಟದಲ್ಲಿ ದಲಿತರು, ಪ್ರಗತಿಪರ ಸಂಘಟನೆಗಳು, ಕಾರ್ಮಿಕರು, ರೈತರು, ಜನಸಾಮಾನ್ಯರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಸಿಪಿಐನ ಗಿರೀಶ್, ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಧನಂಜಯಾರಾಧ್ಯ, ರುದ್ರೇಶಗೌಡ, ತಿಮ್ಮಲಾಪುರ ದೇವರಾಜು,ಆರ್.ಕೆ.ಎಸ್ ನ ಮಂಜುಳ ಗೋನಾಳ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!