ವ್ಯಾಕ್ಸಿನ್ ಪಡೆಯದವರಿಗೆ ಬಾರ್,ಮಾಲ್, ಚಿತ್ರಮಂದಿರ,ಅಂಗಡಿಗಳಿಗೆ ಪ್ರವೇಶ ನಿಷೇಧಿಸಿ:ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್

ತುಮಕೂರು: ವ್ಯಾಕ್ಸಿನ್ ಪಡೆಯದವರಿಗೆ ಪ್ರವೇಶ ನಿಷಿದ್ಧಗೊಳಿಸಬೇಕು. ಲಸಿಕೆ ಪಡೆಯದವರನ್ನು ಯಾವುದೇ ಅಂಗಡಿ ಮುಂಗಟ್ಟು, ಕೈಗಾರಿಕೆ, ಹೋಟೆಲ್ ಉದ್ದಿಮೆ, ಚಲನಚಿತ್ರ ಮಂದಿರಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ತಪ್ಪಿದ್ದಲ್ಲಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಡಂಗುರ ಸಾರುವಂತೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಕೆಸ್ವಾನ್ ಮೂಲಕ  ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಪ್ರತಿ ಹೋಬಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಕಂದಾಯ, ಪಂಚಾಯತಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ/ಸಿಬ್ಬಂದಿಗಳನ್ನು ಬಳಸಿಕೊಂಡು ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನೊಳಗೊಂಡ ತಂಡವು ಸಂಬಂಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮದ ಅರ್ಹರಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಲಸಿಕಾಕರಣದಿಂದ ಯಾರೂ ತಪ್ಪಿಹೋಗದಂತೆ ಎಲ್ಲರಿಗೂ ಲಸಿಕೆ ಹಾಕಿಸಲು ಶ್ರಮಿಸಬೇಕು ಎಂದರಲ್ಲದೆ, ಲಸಿಕಾಕರಣಕ್ಕೆ ಜನರನ್ನು ಸೇರಿಸಲು ಗ್ರಾಮ ಸಹಾಯಕರು, ಪಂಚಾಯತಿ ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕಿಯರು/ ಎಎನ್‌ಎಂ/ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದಲೇ ಲಸಿಕಾಕರಣವನ್ನು ಆರಂಭಿಸಬೇಕು.  ಮಧುಗಿರಿ, ಶಿರಾ, ಪಾವಗಡ, ಕೊರಟಗೆರೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಿಲ್ಲ.  ಯಾವುದೇ ನೆಪ ಹೇಳದೆ ಗುರಿ ಮೀರಿ ಕೋವಿಡ್ ಲಸಿಕೆ ನೀಡಬೇಕು.  ಉದಾಸೀನ ಮಾಡುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದೆಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಈವರೆಗೂ ಲಸಿಕೆ ಪಡೆಯಲು ಅರ್ಹರಿರುವ 19,99,000 ಮಂದಿ ಪೈಕಿ 16,20,000 ಜನರಿಗೆ ಲಸಿಕೆ ನೀಡುವ ಮೂಲಕ ಶೇ. 81 ರಷ್ಟು ಲಸಿಕಾಕರಣವಾಗಿದ್ದು, ಉಳಿದವರಿಗೆಲ್ಲಾ ತಪ್ಪದೇ ಈ ಲಸಿಕಾ ಮೇಳದಲ್ಲಿ ಲಸಿಕೆ ನೀಡಬೇಕೆಂದು ಸೂಚನೆ ನೀಡಿದರು.

ಸಂಧ್ಯಾಸುರಕ್ಷಾ, ವೃದ್ಧಾಪ್ಯವೇತನ, ಕೃಷಿ ಸೌಲಭ್ಯ ಸೇರಿದಂತೆ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯವಾಗಿರುತ್ತದೆ.  ಈ ಕುರಿತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಂಗೂರ ಸಾರುವ ಮೂಲಕ ಜನರಲ್ಲಿ ಲಸಿಕೆ ಪಡೆಯುವಂತೆ ಅರಿವು ಮೂಡಿಸಬೇಕು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲವೆಂದು ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ಲಸಿಕೆ ಪಡೆದು ಲಸಿಕಾ ಮೇಳ ಯಶಸ್ವಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ. 

ಕೈಗಾರಿಕೆ, ಬಸ್‌ನಿಲ್ದಾಣ, ಚಲನ ಚಿತ್ರಮಂದಿರ, ಬಾರ್, ದೇವಸ್ಥಾನ, ಈಜುಕೊಳ, ಕ್ರೀಡಾ ಸಂಕಿರಣ, ಹೋಟೆಲ್, ಜಿಮ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ತಪ್ಪಿದರೆ ಸಂಬಂಧಿಸಿದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವ್ಯಾಕ್ಸಿನ್ ಪಡೆಯದವರಿಗೆ ಪ್ರವೇಶ ನಿಷಿದ್ಧಗೊಳಿಸಬೇಕು. ಲಸಿಕೆ ಪಡೆಯದವರನ್ನು ಯಾವುದೇ ಅಂಗಡಿ ಮುಂಗಟ್ಟು, ಕೈಗಾರಿಕೆ, ಹೋಟೆಲ್ ಉದ್ದಿಮೆ, ಚಲನಚಿತ್ರ ಮಂದಿರಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ತಪ್ಪಿದ್ದಲ್ಲಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು.

  ಅದೇ ರೀತಿ ಲಸಿಕೆ ಪಡೆಯದ ಕಾರ್ಮಿಕರಿಂದ ಕೂಲಿ ಕೆಲಸ ಪಡೆಯುವ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಕಾರ್ಮಿಕರು ದುಡಿಯುವ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲು ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಸರ್ಕಾರಿ/ ಖಾಸಗಿ/ ಅನುದಾನರಹಿತ/ ಅನುದಾನ ಸಹಿತ ಶಾಲಾ/ ಕಾಲೇಜುಗಳ ಬೋಧಕ/ ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು.  ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ/ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳು ಸೂಕ್ತ ಅನುಸರಣೆ ಮಾಡಬೇಕು ಎಂದು ನಿರ್ದೇಶಿಸಿದರು.

ರೆಡ್‌ಕ್ರಾಸ್, ರೋಟರಿ, ಮತ್ತಿತರ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಕಾರ ಪಡೆದು ಲಸಿಕಾಕರಣದಲ್ಲಿ ನಿಗಧಿತ ಗುರಿ ಮೀರಿ ಸಾಧನೆ ಮಾಡಬೇಕು.  ಎಲ್ಲಾ ನೋಡಲ್ ಅಧಿಕಾರಿಗಳು ಕಾರ್ಯ ಸ್ಥಳದಲ್ಲಿ ಹಾಜರಿದ್ದು, ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.  

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಎಲ್ಲಾ ಗ್ರಾಮಪಂಚಾಯತಿ ಮಟ್ಟದಲ್ಲಿ ಅಧಿಕಾರಿ/ ಸಿಬ್ಬಂದಿಗಳು ಕಳೆದ ಮೆಗಾ ಕೋವಿಡ್ ಲಸಿಕಾ ಮೇಳದಂತೆ ಯೋಜನೆ ರೂಪಿಸಿಕೊಂಡು ಲಸಿಕಾಕರಣವನ್ನು ಯಶಸ್ವಿಗೊಳಿಸುವ ಮೂಲಕ ಸಂಪೂರ್ಣ ವ್ಯಾಕ್ಸಿನ್ ಸಹಿತ ಗ್ರಾಮಪಂಚಾಯತಿ ಘೋಷಣೆಗೆ ಶ್ರಮಿಸಬೇಕು ಎಂದು ನಿರ್ದೇಶಿಸಿದರು.

ಇನ್ನೆರಡು ದಿನದೊಳಗೆ ಶೇ.95 ರಷ್ಟು ಲಸಿಕಾಕರಣ ಗುರಿ ಸಾಧಿಸಬೇಕು. ಗ್ರಾಮಪಂಚಾಯತಿಯ ಸದಸ್ಯರು, ಸ್ಥಳೀಯ ಮುಖಂಡರನ್ನು ಒಗ್ಗೂಡಿಸಿಕೊಂಡು ಲಸಿಕಾಕರಣ ನಡೆಸಬೇಕು. ಇದರಿಂದ ಹೆಚ್ಚು ಜನರು ಲಸಿಕೆ ಪಡೆಯುತ್ತಾರೆ.  ಲಸಿಕೆ ಪಡೆಯಲು ಬರುವವರನ್ನು ಅಧಿಕಾರಿಗಳು ಕಾಯಿಸದೆ ಲಸಿಕೆ ನೀಡಬೇಕು.  ಗ್ರಾಮೀಣ ಪ್ರದೇಶದಲ್ಲಿ ಕೆಲಸದ ಮೇಲೆ ಹೋಗುವವರು ಬೆಳಿಗ್ಗೆ ಬೇಗ ಮನೆಯಿಂದ ಹೊರಡುವುದರಿಂದ ಬೆಳಿಗ್ಗೆ 7  ಗಂಟೆಗೆ ಲಸಿಕಾಕರಣ ಪ್ರಾರಂಭ ಮಾಡಬೇಕೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಸಿಕಾಕರಣ ಚುರುಕಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳು ಲಸಿಕೆ ನೀಡುವ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಮತ್ತಿತರರು ಹಾಜರಿದ್ದರು

error: Content is protected !!