ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆ: ರೈತರ ನೋಂದಣಿಗೆ ಮನವಿ

ತುಮಕೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಈವರೆಗೂ ನೋಂದಾಯಿಸದೇ ಇರುವ ಅರ್ಹ ರೈತರು ಸ್ವಯಂ ಘೋಷಣಾ ಪತ್ರ, ಎಲ್ಲಾ ಸರ್ವೇ ನಂಬರ್‌ಗಳ ಪಹಣಿ, ಆಧಾರ್ ಜ಼ೆರಾಕ್ಸ್ ಪ್ರತಿ ಬ್ಯಾಂಕ್ ಪಾಸ್‌ಬುಕ್ ಪ್ರತಿಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ರೈತರಿಗೆ ಮನವಿ ಮಾಡಿದ್ದಾರೆ.

ಈ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯಗಳಿಸಲು ನೆರವಾಗುವ ಉದ್ದೇಶದಿಂದ ಸಾಗುವಳಿ ಭೂಮಿ ಹೊಂದಿರುವ (01.02.2019 ರೊಳಗಾಗಿ ಸ್ವಾಧೀನದಲ್ಲಿರುವ/ ಭೂದಾಖಲೆಯಲ್ಲಿ ಹೆಸರಿರುವ) ಎಲ್ಲಾ ಅರ್ಹ ರೈತ ಕುಟುಂಬಕ್ಕೆ (ಒಂದು ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ೧೮ ವರ್ಷದೊಳಗಿನ ಮಕ್ಕಳು) ವಾರ್ಷಿಕ 6000/- ರೂ.ಗಳ ಆರ್ಥಿಕ ನೆರವನ್ನು 2000/- ರೂ.ಗಳಂತೆ ಮೂರು ಕಂತುಗಳಲ್ಲಿ ಪಡೆಯುವ ಸೌಲಭ್ಯವಿರುತ್ತದೆ. ಅಲ್ಲದೆ ರಾಜ್ಯ ಸರ್ಕಾರದಿಂದ ಪಿ.ಎಂ.ಕಿಸಾನ್ ಯೋಜನೆಯ ಎಲ್ಲಾ ಅರ್ಹ ರೈತರಿಗೆ 2019 ರ ಆಗಸ್ಟ್ 14 ರಿಂದ ಹೆಚ್ಚುವರಿಯಾಗಿ 4000/- ರೂ.ಗಳ ಆರ್ಥಿಕ ನೆರವನ್ನು ಎರಡು ಕಂತುಗಳಲ್ಲಿ ನೀಡುವ ಸೌಲಭ್ಯವಿರುತ್ತದೆ.

 ಜಿಲ್ಲೆಯಲ್ಲಿ 515663 ಮಂದಿ ರೈತರಿದ್ದು, ಇಲ್ಲಿಯವರೆಗೆ 329294 ಮಂದಿ ರೈತರು ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಇನ್ನೂ ನೋಂದಾಯಿಸದೇ ಇರುವ ಅರ್ಹ ರೈತರು ಕೂಡಲೇ ನೋಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.

ನಿವೃತ್ತ/ಹಾಲಿ ಸೇವೆಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವಾಲಯ ಕಛೇರಿ/ಇಲಾಖೆ/ಕ್ಷೇತ್ರ     ಕಛೇರಿ/ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆ/ಅಂಗ ಸಂಸ್ಥೆ/ಸ್ವಾಯತ್ತ ಸಂಸ್ಥೆಗಳ  ಅಧಿಕಾರಿ ಹಾಗೂ ನೌಕರರು/ಸ್ಥಳೀಯ ಸಂಸ್ಥೆಗಳ  ಖಾಯಂ ನೌಕರ (ಗ್ರೂಪ್-ಡಿ/೪ನೇ ವರ್ಗ/  Multi Tasking Staff   ಹೊರತುಪಡಿಸಿ); 10000/- ರೂ. ಅಥವಾ ಹೆಚ್ಚಿನ ಮೊತ್ತ ಪಡೆಯುತ್ತಿರುವ ವಯೋ ನಿವೃತ್ತ/ನಿವೃತ್ತ ಪಿಂಚಣಿದಾರರು (ಗ್ರೂಪ್ D/ 4ನೇ ವರ್ಗ/ Multi Tasking Staff ಹೊರತುಪಡಿಸಿ) ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು, ವೈದ್ಯ, ಅಭಿಯಂತರ, ವಕೀಲ, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪದಂತಹ ವೃತ್ತಿಪರರು ಮತ್ತು ವೃತ್ತಿಪರ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಸದರಿ ವೃತ್ತಿಯನ್ನು ಕೈಗೊಳ್ಳುತ್ತಿರುವವರು ಈ ಯೋಜನೆಯ  ಫಲಾನುಭವಿಯಾಗಲು ಅರ್ಹರಿರುವುದಿಲ್ಲ.   

                ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!