ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯಿಂದ ಕನ್ನಡ ಶಾಲೆ ಅಭಿವೃದ್ಧಿಗೆ ಸೈಕಲ್ ಯಾತ್ರೆ

ತುಮಕೂರು: ಕರ್ನಾಟಕ ರತ್ನ, ಪವರ್‌ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಅವರಿಂದ ಪ್ರೇರಣೆಗೊಂಡ ತುಮಕೂರಿನ ಯುವಕನೊಬ್ಬ ಕಣ್ಮರೆಯ ಅಂಚಿನಲ್ಲಿ ಕನ್ನಡ ಶಾಲೆಗಳು ಎಂಬ ಅಭಿಯಾನಕ್ಕಾಗಿ ಅಖಂಡ ಕರ್ನಾಟಕ ಸೈಕಲ್ ಯಾತ್ರೆಯನ್ನು ಇಂದಿನಿಂದ ಪ್ರಾರಂಭಿಸಿದ್ದಾರೆ.

ಎಂಬಿಎ ವ್ಯಾಸಂಗ ಮಾಡಿರುವ ರಾಹುಲ್ ಅವರು, ತುಮಕೂರಿನಲ್ಲಿ ಬಟ್ಟೆ ವ್ಯಾಪಾರವನ್ನು ಮಾಡುತ್ತಿದ್ದು, ದಿ.ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ದಿ.ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು, ಅವರ ನೆನಪು ಹಾಗೂ ಪ್ರೇರಣೆಯೊಂದಿಗೆ ಕನ್ನಡ ಶಾಲೆಗಳ ಉಳಿವಿಗಾಗಿ 55೦೦ ಕಿಲೋ ಮೀಟರ್ ಸೈಕಲ್ ಪ್ರಯಾಣ ನಡೆಸಲಿದ್ದೇನೆ ಎಂದು ತಿಳಿಸಿದರು.

ಇಂದು ಚಿಕ್ಕಪೇಟೆಯಲ್ಲಿರುವ ಹಿರೇಮಠದಿಂದ ಪ್ರಾರಂಭಗೊಂಡ ಸೈಕಲ್‌ಯಾತ್ರೆ ತುಮಕೂರಿನಲ್ಲಿಯೇ ಪೂರ್ಣಗೊಳ್ಳಲಿದ್ದು, 31ಜಿಲ್ಲೆಗಳಲ್ಲಿಯೂ ಸಂಚರಿಸಲಿದ್ದು, ಆಯಾ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವುದರೊಂದಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಇನ್‌ಸ್ಪೈರ್‍ಡ್ ಅಪ್ಪು ಹ್ಯಾಶ್‌ಟ್ಯಾಗ್ ಸೃಷ್ಟಿಸಲಾಗಿದ್ದು, ಯಾತ್ರಿ ಕನ್ನಡಿಗ ಖಾತೆಯ ಮೂಲಕ ಈ ಸೈಕಲ್ ಯಾತ್ರೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ ಅವರು, ರಾಜ್ಯದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಅಲ್ಲಿನ ಮಾಹಿತಿಯನ್ನು ದಾಖಲಿಸುತ್ತೇನೆ ಎಂದು ತಿಳಿಸಿದರು.

ಸೈಕಲ್ ಪ್ರಯಾಣ ಮಾಡುವುದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಷ್ಟ, ಅವರ ಪ್ರೇರಣೆಯಿಂದಲೇ ಅಖಂಡ ಕರ್ನಾಟಕದ ೫,೫೦೦ ಸಾವಿರ ಕಿಲೋ ಮೀಟರ್ ಸೈಕಲ್ ಪ್ರಯಾಣ, ಲಿಮ್ಕಾ ಮತ್ತು ಗಿನ್ನಿಸ್ ರೆಕಾರ್ಡ್‌ಗೆ ದಾಖಲಾಗುವ ಸಾಧ್ಯತೆ ಇದ್ದು, ಈ ಅಭಿಯಾನ ಮತ್ತು ಜಾಥಾವನ್ನು ಕರ್ನಾಟಕರತ್ನ ಪುನೀತ್ ರಾಜ್‌ಕುಮಾರ್ ಅವರಿಗೆ ಸಮರ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ತುಮಕೂರಿನಿಂದ ರಾಮನಗರ ಮೂಲಕ ಇಡೀ ರಾಜ್ಯದಲ್ಲಿ ಸೈಕಲ್ ಅಭಿಯಾನ ನಡೆಯಲಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿ ಅಭಿಯಾನದ ಅಂಗವಾಗಿ ಸಂದರ್ಶನ ನಡೆಸಿದ ಶಾಲೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿರುವ ಬಗ್ಗೆ ಸಂದರ್ಶಕರ ಸಹಿ ಪಡೆದು, ಲಿಮ್ಕಾ ಮತ್ತು ಗಿನ್ನಿಸ್ ದಾಖಲೆಗೆ ಸಲ್ಲಿಸಲಿದ್ದೇನೆ, ಇಡೀ ರಾಜ್ಯವನ್ನು ಸೈಕಲ್ ಮೂಲಕ 5500 ಕಿಲೋ ಮೀಟರ್ ಕ್ರಮಿಸಿದವರು ಯಾರು ಇಲ್ಲದೇ ಇರುವುದರಿಂದ ಇನ್‌ಸ್ಪೈರ್ ಅಪ್ಪು ಕಣ್ಮರೆಯ ಅಂಚಿನಲ್ಲಿ ಕನ್ನಡ ಶಾಲೆಗಳ ಅಭಿಯಾನಕ್ಕೆ ದಾಖಲೆಯ ಹಿರಿಮೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ಆರ್ಭಟದಲ್ಲಿ ಕಳೆದು ಹೋಗುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಬೇಕು ಹಾಗೂ ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸಬೇಕೆಂದು ನಡೆಸುತ್ತಿರುವ ಈ ಸೈಕಲ್ಲಿಂಗ್ ನಿಜಕ್ಕೂ ಉತ್ತಮವಾದ ಕಾರ್ಯ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಶ್ಲಾಘಿಸಿದರು.

ನಾಡಿನ ಉದ್ದಗಲಕ್ಕೂ 5000ಕಿಮೀ ಸೈಕಲ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ರಾಹುಲ್ ನಂತಹ ಸಾಹಸಮಯ ಕೆಲಸಗಳಿಗೆ ಯುವಕರು ಮುಂದಾದಾಗ ಮಾತ್ರ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಹುಲ್ ಅವರ ಸೈಕಲ್ಲಿಂಗ್ ಯಾತ್ರೆಗೆ ಜಯ ಕರ್ನಾಟಕ ಸಂಘಟನೆ ಬೆಂಬಲ ನೀಡಿದ್ದು, ಎಲ್ಲ ಜಿಲ್ಲೆಗಳಲ್ಲಿ ಜಯ ಕರ್ನಾಟಕ ಸಂಘಟನೆ ಅವರನ್ನು ಸ್ವಾಗತಿಸಿ ಬೀಳ್ಕೊಡಲಿದ್ದಾರೆ ಆ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಜಯ ಕರ್ನಾಟಕ ಸಂಘಟನೆ ಒತ್ತಾಯ ಮಾಡಲಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ನಗರದ ಟೌನ್ ಹಾಲ್ ನಲ್ಲಿ ರಾಹುಲ್ ಅವರಿಗೆ ಸನ್ಮಾನಿಸುವ ಮೂಲಕ ಜಯಕರ್ನಾಟಕ ಸಂಘಟನೆಯಿಂದ ಬೀಳ್ಕೊಡಲಾಯಿತು. ಈ ವೇಳೆ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಉಪಸ್ಥಿತಿರಿದ್ದರು.

error: Content is protected !!