ದಾನಿಗಳಿಂದ 300 ಆಮ್ಲಜನಕ ಸಾಂದ್ರಕ ಕೊಡುಗೆ: ಜಿಲ್ಲಾಡಳಿತಕ್ಕೆ ಜೆ.ಸಿ.‌ಮಾಧುಸ್ವಾಮಿ ಅವರಿಂದ ಹಸ್ತಾಂತರ

ತುಮಕೂರು :ಕೋವಿಡ್-19 ರ ನಿರ್ವಹಣೆ ದೃಷ್ಟಿಯಿಂದ ಕ್ವಾರಿ, ಕ್ರಷರ್, ರೈಸ್ ಮಿಲ್ ಮಾಲೀಕರು ಸುಮಾರು 300 ಆಮ್ಲಜನಕ ಸಾಂದ್ರಕಗಳ ನೆರವು ನೀಡಿದ್ದು, ಇದರಿಂದ‌ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 600 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಾದಂತಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ತುಮಕೂರು ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ , ಜಿಲ್ಲಾ ಜಲ್ಲಿ ಕ್ರಷರ್ ಆಸೋಸಿಯೇಷನ್, ಜಿಲ್ಲಾ ರೈಸ್ ಮಿಲ್ ಆಸೋಸಿಯೇಷನ್ ಹಾಗೂ ಮತ್ತಿತರ‌ ಕೈಗಾರಿಕೆ ಮತ್ತು ಸಂಘ ಸಂಸ್ಥೆಗಳ ವತಿಯಿಂದ ನೀಡಿದ್ದ 300 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು ಆಮ್ಲಜನಕ ಸಾಂದ್ರಕಗಳ ನೆರವಿನಿಂದಾಗಿ ಕೋವಿಡ್ ನಿರ್ವಹಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕೊರೋನಾ ನಿಯಂತ್ರಣದ‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ
ದೊಡ್ಡ ಮಟ್ಟದ ಸಹಕಾರ ದಾನಿಗಳಿಂದ ಬರುತ್ತಿದ್ದು, ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದ ಸಚಿವರು ಜಿಲ್ಲೆಯ ಪರವಾಗಿ, ಸರ್ಕಾರದ ಪರವಾಗಿ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು.

ದುಡಿದ ಹಣದಿಂದ ಸಾರ್ವಜನಿಕ ವಲಯಕ್ಕೆ ಸಹಾಯ ‌ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ತುರುವೇಕೆರೆ ತಾಲ್ಲೂಕಿನಲ್ಲಿ ಹೈಡಾಲ್‌ ಬರ್ಗ್ ಸಿಮೆಂಟ್ ಕಾರ್ಖಾನೆಯು 500‌ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪದನಾ ಘಟಕ ಸ್ಥಾಪನೆಗೆ ಮುಂದಾಗಿದೆ. ಅದೇ ರೀತಿ ಗುಬ್ಬಿಯಲ್ಲಿಯು ರೋಟರಿ ಸಂಸ್ಥೆ ವತಿಯಿಂದ ಆಮ್ಲಜನಕ ‌ಉತ್ಪಾದನಾ‌ ಘಟಕ‌ ಲಭ್ಯವಾಗುತ್ತಿದೆ. ವಿಪ್ರೋದವರು ಒಂದು ಘಟಕ ನೀಡಲಿದ್ದಾರೆ. ಇದಲ್ಲದೆ ಜಪಾನಿನ ಟಿಮ್ಯಾಕ್ ಕಂಪೆನಿಯವರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 2 ಕೆ.ಎಲ್‌. ಸಾಮರ್ಥ್ಯದ ಆಮ್ಲಜನಕ ‌ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿದ್ಧಾರೆ. ನಿರೀಕ್ಷೆಗೂ ಮೀರಿ ದಾನಿಗಳಿಂದ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ನೀಗುತ್ತಿದೆ ಎಂದು ತಿಳಿಸಿದರು.

ಸರ್ಕಾರ ಮತ್ತು ದಾನಿಗಳ‌ ನೆರವಿನಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ. ಇದರಿಂದ ಆಮ್ಲಜನಕ ಉತ್ಪಾದನೆಯಲ್ಲಿ ಜಿಲ್ಲಾಡಳಿತ ಸ್ವಯಂ ಶಕ್ತಿ‌ ಹೊಂದಲಿದೆ ಎಂದರು.

ಆಮ್ಲಜನಕದ ಉತ್ಪಾದನೆಯಿಂದಾಗಿ ಕೋವಿಡ್ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ಕೋವಿಡ್ ಮೂರನೇ ಅಲೆ ಬಂದರು ನಿರ್ವಹಣೆ ಮಾಡುವ ಶಕ್ತಿ ಜಿಲ್ಲಾಡಳಿತಕ್ಕೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಮ್ಲಜನಕ ‌ಸಾಂದ್ರಕಗಳು ಲಭ್ಯವಿರುವಂತೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಟಿ.ಎಂ.ಸಿ.ಸಿ.ಬ್ಯಾಂಕ್ ನ ಜಯಕುಮಾರ್ ಅವರೂ ಸಹ ಕೋವಿಡ್ ಸಮಸ್ಯೆಯನ್ನು ಎದುರಿಸಲು ನೆರವಿನ ಹಸ್ತ ನೀಡಿದ್ದಾರೆ‌. ಅವರು ತುಮಕೂರಿನ ಸ್ಮಶಾನ ಭೂಮಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಹೊಂದಿದವರನ್ನು ಸುಡುವ ಕಾರ್ಯಕ್ಕೆ ಆರು ಒಲೆಗಳ ನೆರವು ನೀಡಿದ್ದಾರೆ. ರುದ್ರ ಭೂಮಿಯ ವ್ಯವಸ್ಥೆಯ ನಿರ್ವಹಣೆಯನ್ನು ಅವರೇ ವಹಿಸಿಕೊಂಡಿದ್ದಾರೆ. ಇದರಿಂದ ಮೃತರಾದ ಸೋಂಕಿತರ ಸಂಸ್ಕಾರಕ್ಕೆ ಸಾಕಷ್ಟು ಅನುಕೂಲವಾಗಿದೆ‌ ಎಂದರು.

ಕೋವಿಡ್ ಸಂದರ್ಭದಲ್ಲಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ನಗರದ ಕುಡಿಯುವ ನೀರು ಪೂರೈಕೆ ಸಂಬಂಧ ಸಂಸದ ಜಿ.ಎಸ್. ‌ಬಸವರಾಜ್ ಹಾಗೂ ಶಾಸಕ‌ ಜ್ಯೋತಿ ಗಣೇಶ್ ಒತ್ತಾಸೆ ಮೇರೆಗೆ ನಗರದ ಕುಡಿಯುವ ನೀರಿಗೆ ಮೂಲಧಾರವಾಗಿರುವ ಬುಗುಡನಹಳ್ಳಿ ಕೆರೆಗೆ ನೀರು ‌ಹರಿಸಲು ಕ್ರಮ ವಹಿಸಲಾಗಿದೆ ಅದರಂತೆಯೇ ಜಿಲ್ಲೆಯ ಕುಡಿಯುವ ನೀರಿನ ಅಭಾವ ಇರುವ ಪ್ರದೇಶದ ಕೆರೆಗಳಿಗೆ ನೀರು ಹರಿಸಲು ಕ್ರಮ ಜರುಗಿಸಲಾಗಿದೆ. ಬುಗುಡನಹಳ್ಳಿ ಕೆರೆಗೆ 0 .4ಟಿಎಂಸಿ ಹಾಗೂ ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತಿಪಟೂರು ತಾಲಕುಗಳ ಕೆರೆಗಳಿಗೆ 0.4ಟಿಎಂಸಿ ಸೇರಿದಂತೆ ಒಟ್ಟು 0.8 ಟಿಎಂಸಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕುಡಿಯುವ ನೀರಿಗಾಗಿ ನಗರದ ನಾಗರಿಕರು ಆತಂಕ ಪಡುವುದು ಬೇಡ ಎಂದು ಮನವಿ ಮಾಡಿದರು.

ಸಂಸದ ಜಿ‌. ಎಸ್. ಬಸವರಾಜ ಮಾತನಾಡಿ,‌ ಕೋವಿಡ್ ನಿರ್ವಹಣೆ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ನೆರವಾಗಿ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರೆ ರೀತಿಯಲ್ಲಿ ಸಹಕಾರವಾದವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಟಿ.ಎಂ.ಸಿ.ಸಿ ಬ್ಯಾಂಕ್ ನ‌ ಜಯಕುಮಾರ್ ಹಾಗೂ ಕ್ವಾರಿ, ಕ್ರಷರ್ ಮಾಲೀಕರ ತಂಡ ಸುಮಾರು ಎರಡು ಕೋಟಿ ರೂ. ವೆಚ್ಚದ ಆಮ್ಲಜನಕ ಸಾಂದ್ರಕಗಳನ್ನು ನೆರವು ನೀಡಿದೆ. ಕೋವಿಡ್ ನಿಂದ ಬಳಲುತ್ತಿರುವ ರೋಗಿಗಳಿಗೆ‌ ಸಮರ್ಪಕವಾಗಿ ಚಿಕಿತ್ಸೆ ನೀಡಲು ಈ ಸಾಂದ್ರಕಗಳು ಸಹಕಾರಿಯಾಗಲಿದೆ ಎಂದರು.

ಆಮ್ಲಜನಕ ಸಾಂದ್ರಕ ಹಾಗೂ ಆಮ್ಲಜನಕ ಘಟಕ ಸ್ಥಾಪನೆಗಳಿಂದಾಗಿ ಸಾಮಾನ್ಯ ಜನರಲ್ಲಿ ಮೂಡಿರುವ ಆತಂಕ ದೂರವಾಗಿದೆ. ಸಹಾಯ ಮಾಡಿರುವ ಎಲ್ಲಾ ಕ್ವಾರಿ, ಕ್ರಷರ್, ರೈಸ್ ಮೀಲ್, ಇತರೆ ಕಂಪನಿ ‌ಮಾಲೀಕರಿಗೆ ಅಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಡಾ.ಕೆ. ವಿದ್ಯಾಕುಮಾರಿ,‌ಎಸ್ಪಿ ಡಾ.ಕೆ. ವಂಶಿಕೃಷ್ಣ, ಡಿಹೆಚ್ ಓ ನಾಗೇಂದ್ರಪ್ಪ ಸೇರಿದಂತೆ ಕ್ರಷರ್,ಕ್ವಾರಿ, ರೈಸ್ ಮಿಲ್‌, ಇತರೆ ಕೈಗಾರಿಕೆಗಳ ಹಾಗೂ ಸಂಘಸಂಸ್ಥೆಗಳ ಮಾಲೀಕರು ಹಾಜರಿದ್ದರು.

error: Content is protected !!