ಎಚ್ ಡಿ ಕುಮಾರಸ್ವಾಮಿ ವಿರುದ್ದ ಕಾಂಗ್ರೇಸ್ ಅಲ್ಪಸಂಖ್ಯಾತ ಮುಖಂಡರ ಆಕ್ರೋಶ.

ಬೆಂಗಳೂರು: ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಸ್ಲಿಂ ಮುಖಂಡರ ರಾಜಕೀಯ ನರಮೇಧ ನಡೆಸುತ್ತಿದ್ದಾರೆಂದು ಹೇಳಿದ್ದರು.

ಹೇಳಿಕೆಗೆ ಇದೀಗ ಕಾಂಗ್ರೆಸ್ಅಲ್ಪಸಂಖ್ಯಾತ ಮುಖಂಡರು ಒಟ್ಟಾಗಿ ತಿರುಗಿಬಿದ್ದಿದ್ದಾರೆ. ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಆರಿಫ್ ಹುಸೇನ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ವಿಜಯ್ ಕುಮಾರ್, ಉಪ ಮೇಯರ್ ಅನ್ವರ್ ಬೇಗ್, ಮಾಜಿ ಸಚಿವ ಯುಟಿ ಖಾದರ್, ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿರೋಧ ಪಕ್ಷದ ಸದಸ್ಯ ನಾಸೀರ್ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜೆಡಿಎಸ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಮುಂಬರುವ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬರಲು ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗಾಗಿಯೇ ಅಕ್ಟೋಬರ್ ೩೦ರಂದು ಹಾನಗಲ್ ಹಾಗೂ ಸಿಂದಗಿಯಲ್ಲಿ ನಡೆಯಲಿರುವ ಉಪಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಆರೀಫ್ ಹುಸೇನ್ ಅವರು ಮಾತನಾಡಿ, ನಮ್ಮ ಸಮುದಾಯದ ಜನರಿಗೆ ವಾಸ್ತವಾಂಶ ಏನೆಂದು ತಿಳಿದಿದೆ. ನಾನು ಮೇಯರ್ ಸ್ಥಾನದಿಂದ ಕೆಳಗಿಳಿದ ಬಳಿಕ ಚಲನಚಿತ್ರ ನಿರ್ಮಾಪಕರಾಗಿದ್ದ ಕುಮಾರಸ್ವಾಮಿ ರಾಜಕೀಯ ಪ್ರವೇಶಿಸಿದರು. ಈಗ, ಅವರು ನಮ್ಮ ನಾಯಕ ಸಿದ್ದರಾಮಯ್ಯನವರನ್ನು ದೂಷಿಸುತ್ತಿದ್ದಾರೆ ಮತ್ತು ಅವರು ಮುಸ್ಲಿಮರನ್ನು ಬದಿಗೊತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕುಮಾರಸ್ವಾಮಿಯವರು ನಿಜಕ್ಕೂ ಮುಸ್ಲಿಂ ಪರವಾಗಿದ್ದಿದ್ದೇ ಆಗಿದ್ದರೆ, ಕನಕಪುರ ಕ್ಷೇತ್ರದಿಂದ ರೆಹಮಾನ್ ಶೆರಿಫ್ ಅವರನ್ನು ಕಣಕ್ಕಿಳಿಸಬಹುದಿತ್ತು… ಆದರೆ ಅವರಿಗೆ ಟಿಕೆಟ್ ನೀಡಲಿಲ್ಲ ಎಂದು ಹೇಳಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಒಪ್ಪಂದವನ್ನು ಗೌರವಿಸುವಲ್ಲಿ ವಿಫಲವಾಯಿತು, ಇದು ಮೈತ್ರಿ ಮುರಿದು ಬೀಳಲು ಕಾರಣವಾಯಿತು ಎಂದು ತಿಳಿಸಿದ್ದಾರೆ.

ಲಕ್ಷ್ಮಣ್ ಅವರು ಮಾತನಾಡಿ, ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಮುಸ್ಲಿಮರನ್ನು ರಾಜಕೀಯ ಸಾಧನವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ವೇಳೆ ಸಿದ್ದರಾಮಯ್ಯ ಅವರ ವಿರುದ್ಧದ ಆರೋಪ ಸುಳ್ಳು ಎಂದು ಹೇಳಿದರು.

error: Content is protected !!