ಓಮಿಕ್ರಾನ್ ಆತಂಕ: ರಾಜ್ಯದಲ್ಲಿ ಇಂದಿನಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು: ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ನೈಟ್ ಕರ್ಫ್ಯೂ ಮಂಗಳವಾರದಿಂದ ಜಾರಿಯಾಗಲಿದ್ದು, ಮುಂದಿನ 10 ದಿನಗಳ ಕಾಲ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧಗಳನ್ನು ಇರಲಿದೆ.

ಇದರ ಜೊತೆಗೆ ಸಭೆ, ಸಮಾರಂಭ, ಸಮಾವೇಶ, ಮದುವೆ ಕಾರ್ಯಕ್ರಮಗಳಲ್ಲಿ 300ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ನಿಯಮ ಕೂಡ ಅನ್ವಯವಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಳೆದ ಭಾನುವಾರ ನಡೆದ ಸಭೆ ಬಳಿಕ ರಾತ್ರಿ ಕರ್ಪ್ಯೂ ಮಾರ್ಗಸೂಚಿ ಪ್ರಕಟಿಸಲಾಗಿತ್ತು.

ಹೊಸ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಡಿ.28ರಿಂದ ರಾತ್ರಿಯಿಂದ ಬರುವ ಜ.7ರ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅನಗತ್ಯ ಸುತ್ತಾಟ, ಜನ ಸೇರುವಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು, ಬಾರ್, ಪಬ್, ರೆಸ್ಟೋರೆಂಟ್, ಚಲನಚಿತ್ರ ಮಂದಿರ ಸೇರಿದಂತೆ ಅಗತ್ಯ ಸೇವೆಯಲ್ಲದ ಯಾವುದೇ ವಾಣಿಜ್ಯ ಚಟುವಟಿಕೆಗೂ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಪಬ್‌ಗಳು ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟು ಕಾರ್ಯನಿರ್ವಹಿಸಬೇಕಾಗುತ್ತದೆ, ಯಾವುದೇ ಸೂಚನೆಗಳ ಉಲ್ಲಂಘನೆಯಾದರೂ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ, 2005, ಐಪಿಸಿ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ, 2020 ರ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ನಡುವೆ ಹೊಸ ನಿರ್ಬಂಧಕ್ಕೆ ಹೋಟೆಲ್, ರೆಸ್ಟೋರೆಂಟ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ನಷ್ಟದಲ್ಲಿ ತತ್ತರಿಸಿರುವ ವಲಯಕ್ಕೆ ಇದು ದೊಡ್ಡ ಹೊಡೆತವಾಗಿದೆ ಎಂದು ಹೇಳಿದ್ದಾರೆ.

ನಮ್ಮ ಕ್ಷೇತ್ರವು ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಹೊಸ ವರ್ಷದಲ್ಲಿ ಸಾಕಷ್ಟು ಆದಾಯವನ್ನು ಪಡೆಯುತ್ತದೆ. ಈ ಸಂದರ್ಭದಲ್ಲಿ ಶೇ.50 ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಕಾರ್ಯನಿರ್ವಹಿಸುವ ನಿರ್ಬಂಧ ಮತ್ತು ರಾತ್ರಿ ಕರ್ಫ್ಯೂ ನಮಗೆ ದೊಡ್ಡ ಹೊಡೆತವನ್ನು ನೀಡಲಿದೆ ಎಂದು ಹೋಟೆಲ್ ಉದ್ಯಮಿಯೊಬ್ಬರು ಹೇಳಿದ್ದಾರೆ.

error: Content is protected !!