ಶೃಂಗಸಭೆ: ಮೋದಿ ಭೇಟಿ ವಿರೋಧಿಸಿ ಅನಿವಾಸಿ ಭಾರತೀಯರ ಪ್ರತಿಭಟನೆ

ಜಾಗತಿಕ ತಾಪಮಾನ ತಡೆಗಾಗಿ ಗ್ಲಾಸ್ಗೋದಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಯುನೈಟೆಡ್‌ ಕಿಮ್‌ಡಮ್‌‌ (ಯುಕೆ) ನಲ್ಲಿರುವ ದೊಡ್ಡ ಸಂಖ್ಯೆಯ ಭಾರತೀಯರು ಐತಿಹಾಸಿಕ ರೈತ ಚಳವಳಿಯನ್ನು ಬೆಂಬಲಿಸಿ, ಮೋದಿಯವರನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

“ಭಾರತೀಯ ರೈತರ ಹೋರಾಟವೇ ನಮ್ಮ ಹೋರಾಟ” ಎಂಬ ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಲಾಯಿತು. “ನೂರಾರು ಹೋರಾಟಗಾರರನ್ನು ಮೋದಿ ಕೊಂದಿದ್ದಾರೆ” ಎಂದು ಆರೋಪಿಸಿ, ಭಾರತೀಯ ಮೂಲದ ನಿವಾಸಿಗಳು ಪ್ರತಿಭಟನೆ ನಡೆಸಿದ್ದು, ‘ಸ್ಕಾಟ್‌ಲ್ಯಾಂಡ್‌ಗೆ ಮೋದಿ ಬರಬಾರದು’ ಆಗ್ರಹಿಸಿದ್ದಾರೆ.

ಕೃಷಿಯನ್ನು ಕಾರ್ಪೊರೇಟ್‌ ಕೈಗೆ ನೀಡುತ್ತಿರುವುದನ್ನು ವಿರೋಧಿಸಿ ರೈತರು ಹೋರಾಟ ಮಾಡುತ್ತಿದ್ದಾರೆ. ಎಂಎಸ್‌ಪಿ ನಿಗದಿಪಡಿಸಬೇಕೆಂದು ಹೋರಾಡುತ್ತಿದ್ದಾರೆ.

ವಿವಿಧ ದೇಶಗಳಲ್ಲಿರುವ ಭಾರತೀಯರು ರೈತ ಹೋರಾಟವನ್ನು ಬೆಂಬಲಿಸುತ್ತಿರುವುದನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಶ್ಲಾಘಿಸಿದೆ. ಇದು ಸರ್ಕಾರದ ಮೇಲೆ ಒತ್ತಡ ತರಲು ಸಹಕರಿಸಲಿದೆ. ಹೆಚ್ಚಿನ ಸಮಯ ವ್ಯರ್ಥ ಮಾಡದೆ ರೈತರ ಬೇಡಿಕೆಯನ್ನು ಸರ್ಕಾರ ಸ್ವೀಕರಿಸಬೇಕು ಎಂದು ಎಸ್‌ಕೆಎಂ ಆಗ್ರಹಿಸಿದೆ.

ರೈತರ ಹೋರಾಟವನ್ನು ತಡೆಯಲು ಸರ್ಕಾರ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ರೈತರ ಮೇಲೆ ಆಗುತ್ತಿರುವ ಕ್ರೌರ್ಯವನ್ನು ಕಂಡು ಕಾಣದಂತೆ ಇದ್ದಾರೆ.

ಉತ್ತರ ಪ್ರದೇಶದ ಲಖಿಂಪುರ್‌ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರ ಅವರ ಪುತ್ರ ಆಶೀಶ್‌ನನ್ನು ಬಂಧಿಸಲಾಗಿದೆ. ಈ ಘಟನೆಯನ್ನೇ ನೆಪ ಮಾಡಿಕೊಂಡು ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ಬಲವಂತವಾಗಿ ಹೊರಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ.

“ದೆಹಲಿ ಗಡಿಗಳಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಒಕ್ಕೂಟ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ರೈತರನ್ನು ಗಡಿಗಳಿಂದ ಹೊರ ಹಾಕಲು ಪ್ರಯತ್ನಿಸಿದರೆ, ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು “ಗಲ್ಲಾ ಮಂಡಿಗಳನ್ನಾಗಿ” (ಧಾನ್ಯ ಮಾರುಕಟ್ಟೆಗಳು) ಆಗಿ ಪರಿವರ್ತಿಸಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್‌ ಟಿಕಾಯತ್ ಹೇಳಿದ್ದಾರೆ.

ಹೋರಾಟಕ್ಕೆ ಒಂದು ವರ್ಷಗಳಾಗಿದ್ದು, ಸುದೀರ್ಘ ಹೋರಾಟದ ಫಲವಾಗಿ ರೈತರಿಗೆ ವಿಶ್ವದ ಮೂಲೆಮೂಲೆಗಳಿಂದ ಬೆಂಬಲಗಳು ವ್ಯಕ್ತವಾಗುತ್ತಿವೆ. ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಅಲ್ಲಿನ ಭಾರತೀಯರು ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!