ವಿಧಾನ ಪರಿಷತ್ ಚುನಾವಣೆಗೆ ಇಂದಿನಿಂದ ನಾಮಪತ್ರ ಸ್ವೀಕೃತಿ

ತುಮಕೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 16 ರಿಂದ ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.


ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ 14 ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ತೆರವಾಗುವ ಸದಸ್ಯ ಸ್ಥಾನಕ್ಕೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 16 ರಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದರಲ್ಲದೆ, ನಾಮಪತ್ರಗಳ ಸ್ವೀಕೃತಿ/ ಪರಿಶೀಲನೆ/ ಹಿಂತೆಗೆದುಕೊಳ್ಳುವಿಕೆ/ ಅಂತಿಮ ಉಮೇದುವಾರರ ಪಟ್ಟಿ ಸಿದ್ಧಪಡಿಸುವ/ ಮತ ಪತ್ರಗಳ ಹಂಚಿಕೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಮತ್ತಿತರ ಎಲ್ಲಾ ಪ್ರಕ್ರಿಯೆಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯಲಿರುವುದರಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಿದರು.

ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಜಿಲ್ಲಾಧಿಕಾರಿಗಳ ಕಛೇರಿಯ 100 ಮೀಟರ್ ವ್ಯಾಪ್ತಿಯಲ್ಲಿ ಅನಗತ್ಯ ವಾಹನ ಸಂಚಾರ, ಸಾರ್ವಜನಿಕರ ಅನಾವಶ್ಯಕ ಓಡಾಟ, ಗುಂಪುಗೂಡುವಿಕೆ ನಿಬಂಧಿಸಲಾಗುವುದು. ಮಿನಿವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಗುರುತಿನ ಚೀಟಿ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯೊಂದಿಗೆ 4 ಮಂದಿ(1+4 )ಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.

ನಾಮಪತ್ರಗಳನ್ನು ಸಲ್ಲಿಸಲು ಬರುವ ಉಮಾದುವಾರರು/ ರಾಜಕೀಯ ಪಕ್ಷದವರಿಗೆ ಸಂಬಂಧಿಸಿದ ಮೂರು ವಾಹನಗಳಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಗೇಟಿನವರೆಗೆ(100 ಮೀ.) ಬರಲು ಮಾತ್ರ ಅವಕಾಶವಿರುತ್ತದೆ. ವಾಹನಗಳಿಗೆ ಮಿನಿ ವಿಧಾನ ಸೌಧದ ಗೇಟಿನ ಒಳಗೆ ಪ್ರವೇಶವಿರುವುದಿಲ್ಲ. ಮಿನಿವಿಧಾನಸೌಧದ ಮುಂದಿನ/ ಹಿಂದಿನ ಗೇಟುಗಳ ಹಾಗೂ ಚುನಾವಣಾಧಿಕಾರಿಗಳ ಕೊಠಡಿ ಬಳಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!