ತುಮಕೂರು : ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವತಿಯಿಂದ ಅಕ್ಟೋಬರ್ 22 ರಿಂದ 31ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳವನ್ನು ಆಯೋಜಿಸಲಾಗಿದೆ ಎಂದು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸಾಬೂನು ವಿಶ್ವ ವಿಖ್ಯಾತಿ ಪಡೆದಿದ್ದು, ನಮ್ಮ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ನಮ್ಮ ಸಂಸ್ಥೆ ಹೆಚ್ಚಿನ ವಹಿವಾಟು ಹೊಂದಿದ್ದು, 2023-24 ಸಾಲಿನಲ್ಲಿ 1570 ಕೋಟಿ ರೂ. ವಹಿವಾಟು ನಡೆಸಿ ಅಂದಾಜು ನಿವ್ವಳ 362 ಕೋಟಿ ರೂ.ಗಳ ಲಾಭ ಗಳಿಸಿದೆ. ಪ್ರಸ್ತುತ ಆರ್ಥಿಕ ವರ್ಷ 2024-25ರಲ್ಲಿ ನಮ್ಮ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೆಪ್ಟೆಂಬರ್ 24ರವರೆಗಿನ ಮಾರಾಟದಲ್ಲಿ 901.39 ಕೋಟಿ ರೂ.ಗಳ ವಹಿವಾಟು ನಡೆದಿದೆ ಎಂದರು.
ನಮ್ಮ ಸಂಸ್ಥೆಯ 19 ಉತ್ಪನ್ನಗಳು ಮೂರು ಸಲ ಸಿಎಂ ರತ್ನ ಪ್ರಶಸ್ತಿಗೆ ಭಾಜನವಾಗಿದ್ದು, ಪರಿಸರ ಸ್ನೇಹಿ ಉದ್ಯಮ ಪ್ರಶಸ್ತಿಯನ್ನು ಪಡೆದಿದೆ. ಅಲ್ಲದೆ ನಮ್ಮ ಉತ್ಪನ್ನಗಳು 20 ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ನಗರದಲ್ಲಿ 10 ದಿನಗಳ ಕಾಲ ನಡೆಯುವ ಸಾಬೂನು ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಭಾರತದಲ್ಲಿ 6 ಕಡೆ ನಮ್ಮ ಶಾಖಾ ಕಚೇರಿಗಳಿದ್ದು, ನಮ್ಮ ಸಂಸ್ಥೆ ರಾಜ್ಯದ 900 ರೈತರೊಂದಿಗೆ ಒಡಂಬಡಿಕೆ ಮಾಡಿ ಕೊಂಡಿದೆಯಲ್ಲದೆ, 3308 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲು ನಮ್ಮ ಸಂಸ್ಥೆ ವತಿಯಿಂದ ಸಸಿಗಳನ್ನು ವಿತರಿಸಿ ಅವುಗಳನ್ನು ಬೆಳೆಸಲು ಮಾರ್ಗದರ್ಶನ, ದರ ನಿಗಧಿ, ಇತ್ಯಾದಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.
ಶ್ರೀಗಂಧದ ಸಸಿಯನ್ನು 10 ರಿಂದ 15 ವರ್ಷಗಳ ನಂತರ ಕಟಾವಿಗೆ ಬರುತ್ತವೆ. ಅರಣ್ಯ ಇಲಾಖೆ ನಿರ್ದೇಶನದಂತೆ ಮರದ ಕಾಂಡ, ರೆಂಬೆ, ಬೇರುಗಳು ಹೀಗೆ ವಿವಿಧ ಭಾಗಕ್ಕೆ ದರ ನಿಗಧಿ ಮಾಡಲಾಗುವುದು ಎಂದರು.
ಮೈಸೂರು ಸ್ಯಾಂಡಲ್ ಸೋಪ್ ಮೇಳದಲ್ಲಿ ಏನೆಲ್ಲಾ ಇರಲಿದೆ :-
ಮೇಳದಲ್ಲಿ ಮೈಸೂರ್ ಸ್ಯಾಂಡಲ್ ಸೋಪ್, ಗೋಲ್ಡ್, ಮೈಸೂರ್ ಸ್ಯಾಂಡಲ್ ಮಿಲೇನಿಯಂ, ಬಾಡಿವಾಶ್, ಮೈಸೂರ್ ರೋಜ್, ಬೇಬಿ ಸೋಪ್, ಗೋಲ್ಡ್ ಸಿಕ್ಸರ್, ವೇವ್ ಟರ್ಮರಿಕ್ ಸೋಪ್, ಟಾಲ್ಕ್, ಕ್ಲೀನಾಲ್, ಅಗರಬತ್ತಿಗಳು, ಧೂಪ್, ಡಿಟಜೆರ್ಂಟ್ ಪೌಡರ್, ಪಾಯಿಂಟ್ ಅಡ್ವಾನ್ಸ್ಡ್ ಲಿಕ್ವಿಡ್ ಡಿಟಜೆರ್ಂಟ್, ಹ್ಯಾಂಡ್ ವಾಶ್, ಆಯಿಲ್, ಡಿಟಜೆರ್ಂಟ್ ಕೇಕ್, ವಾಷಿಂಗ್ ಬಾರ್ ಸೋಪ್ ಮತ್ತಿತರ ಉತ್ಪನ್ನಗಳ ಪ್ರದರ್ಶನ ಇರಲಿದೆ. ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.