ಬೆಂಗಳೂರು: ಆನೇಕಲ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಕೊಲೆ.

ಬೆಂಗಳೂರು: ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ರಿಯಲ್ ಎಸ್ಟೇಟ್ ಉದ್ಯಮಿಯ ಕಾರು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿದ್ದು, ಹಂತಕರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಹತ್ಯೆಯಾದ ಉದ್ಯಮಿಯನ್ನು ರಾಜಶೇಖರ್ ರೆಡ್ಡಿ(42) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೋರ್ ಮೂಲದ ರೆಡ್ಡಿ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದರು.

ರೆಡ್ಡಿ ಯಾವುದೋ ಕೆಲಸದ ಮೇಲೆ ಆನೇಕಲ್‌ಗೆ ಹೋಗಿದ್ದು, ಸಂಜೆ ವಾಪಸಾಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ 7.45 ರ ಸುಮಾರಿಗೆ, ಮಾರಕಾಸ್ತ್ರಗಳೊಂದಿಗೆ ಆಗಮಿಸಿದ ದಾಳಿಕೋರರ ತಂಡ ಕಾರು ಅಡ್ಡಗಟ್ಟಿ, ವಾಹನದ ಕಿಟಕಿ ಗಾಜುಗಳನ್ನು ಒಡೆದು ಉದ್ಯಮಿಯನ್ನು ಕಾರಿನಿಂದ ಹೊರಗೆಳೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಶಿವಾಜಿ ವೃತ್ತದ ಬಳಿಯಿರುವ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಅವರ ನಿವಾಸದ ಸಮೀಪ ಈ ಭೀಕರ ಘಟನೆ ನಡೆದಿದೆ. ದಾಳಿಕೋರರ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ. “ನಾವು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ. ಆದರೆ ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಹಣಕಾಸು ಅಥವಾ ಜಮೀನು ವಿವಾದದ ಹಿನ್ನೆಲೆಯಲ್ಲಿ ರೆಡ್ಡಿಯನ್ನು ಕೊಲೆ ಮಾಡಿರುವ ಶಂಕೆ ಇದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

error: Content is protected !!