ತುಮಕೂರು: ತುಮಕೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಯುಟಿಲಿಟಿ ಮಾಲ್(Muliti Utility Mall) ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮಾಲ್ ನಿರ್ಮಾಣ ಸ್ಥಳದಲ್ಲಿರುವ ವಿನಾಯಕ ದೇವಾಲಯ ತೆರವುಗೊಳಿಸಲು ಮುಂದಾದ್ರೆ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಮಾಲ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಮುತಾಲಿಕ್ ವಿನಾಯಕ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮಾರ್ಕೆಟ್ ನ ವ್ಯಾಪಾರಸ್ಥರು, ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು.ದೇವಾಲಯ ತೆರವುಗೊಳಿಸಲು ಮುಂದಾದ್ರೆ ಹೋರಾಟ ಮಾಡುವಂತೆ ಸ್ಥಳೀಯರಿಗೆ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1950 ರಲ್ಲಿ ವಿನಾಯಕ ಬಡಾವಣೆ ಕಾನೂನಿನ ಪ್ರಕಾರ ನಿರ್ಮಾಣವಾಗಿದೆ, ಬಡಾವಣೆಯ ನಕ್ಷೆಯ ಪ್ರಕಾರ 1 ಎಕರೆ 30 ಗುಂಟೆ ಜಾಗ ಪಾರ್ಕ್ ಗೆ ಮೀಸಲಿರಿಸಲಾಗಿದ್ದು ಪಾರ್ಕ್ ಎನ್ನುವುದು ದಾಖಲೆಗಳಲ್ಲಿದೆ. ಮದ್ಯದಲ್ಲಿ ಹಿಂದಿನಿಂದಲೂ ಗಣೇಶನ ಪ್ರತಿಷ್ಠಾಪನೆ ಮಾಡಲಾಗ್ತಿತ್ತು. ಆಮೇಲೆ ಗಣಪತಿ ಪ್ರತಿಷ್ಠಾಪನಾ ಮಂಡಳಿಯವರಿಗೆ ಬೇರೆ ಜಾಗ ನೀಡಲಾಗಿದೆ. ಈ ಜಾಗವನ್ನ ಇಸ್ಲಾಮಿಕ್ ಎಜುಕೇಷನ್ ಸೊಸೈಟಿಗೆ, ಮತ್ತೊಬ್ಬ ಗುತ್ತಿಗೆದಾರನಿಗೆ 30 ವರ್ಷ ಲೀಸ್ ಗೆ ನೀಡಲಾಗಿದೆ ಇದು ಅನ್ಯಾಯ ಇದನ್ನ ಖಂಡಿಸುತ್ತೇವೆ. ಈ ಜಾಗ ಪಾರ್ಕ್ ಹಾಗೆ ಉಳಿಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಹೋರಾಟ ಮಾಡುತ್ತಿವೆ. ಈ ಸ್ಥಳದಲ್ಲಿರುವ ದೇವಸ್ಥಾನವನ್ನ ತೆರವುಗೊಳಿಸಿ ಬೇರೆಡೆ ನಿರ್ಮಾಣ ಮಾಡಿಕೊಡ್ತೆವೆ ಎಂದು ಬೂಟಾಟಿಕೆ ಮಾತುಗಳನ್ನಾಡುತ್ತಿದ್ದಾರೆ.
ಅಲ್ಲದೆ ಈ ಸ್ಥಳದಲ್ಲಿ ಅನ್ಯ ಕೋಮಿನ ಚರ್ಚ್ ಮಸಿದಿ ಇದ್ದಿದ್ರೆ ಇದೇ ರೀತಿ ತೆರವುಗೊಳಿಸಲು ಮುಂದಾಗುತ್ತಿದ್ರಾ….? ಹಿಂದೂಗಳ ತಾಳ್ಮೆಯಿಂದ ಇದ್ದಾರೆ, ಗಲಾಟೆ ಮಾಡೋದಿಲ್ಲ ಎಂದು ಮೇಲಿಂದ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಹೀಗೆ ಮುಂದುವರೆದ್ರೆ ವಿಶ್ವ ಹಿಂದೂಪರಿಷತ್ ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ಚಲೋ ತುಮಕೂರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.