ತುಮಕೂರು: ಕಲ್ಪತರು ನಾಡು ತುಮಕೂರು ‌ಜಿಲ್ಲೆಯಲ್ಲಿ ಜೀತ ಪದ್ದತಿ ಇನ್ನೂ‌ ಜೀವಂತವಾಗಿದೆ. ಶುಂಠಿ ಬೆಳೆಗಾರರ ಕ್ಯಾಂಪ್ ಗಳಲ್ಲಿ ಒತ್ತೆಯಾಳುಗಳ ರೀತಿ ಇಟ್ಟುಕೊಂಡು ಜೀತದಾಳಂತೆ ದುಡಿಯುತ್ತಿದ್ದ 30ಕ್ಕೂ ಹೆಚ್ಚು ದಲಿತ ಬಡ ಕೂಲಿ ಕಾರ್ಮಿಕರನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮ, ಮಂಜುನಾಥ ಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ರೈತರಿಂದ ನೂರಾರು ಏಕರೆ ಭೂಮಿಯನ್ನ ಗುತ್ತಿಗೆ ಆಧಾರದಲ್ಲಿ‌ ಬಾಡಿಗೆ ಪಡೆದು ಶುಂಠಿ ಬೆಳೆಯನ್ನ ಬೆಳೆಯುತ್ತಿದ್ದಾರೆ.‌ ಶುಂಠಿ ಹೊಲದಲ್ಲಿ ಕೆಲಸ ಮಾಡಲು ಮೈಸೂರು, ಚಾಮರಾಜನಗರ, ಕೊಳ್ಳೆಗಾಲ,ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಂದ ಹಿಂದುಳಿದ, ದಲಿತ ಬಡ ಕೂಲಿ‌ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ.

ಕಾರ್ಮಿಕರ ಬಳಿ ಇದ್ದ ಆಧಾರ್ ಕಾರ್ಡ್, ಓಟರ್ ಐಡಿ, ಮೊಬೈಲ್‌ ಇನ್ನಿತರೆ ವಸ್ತುಗಳನ್ನ ಕಿತ್ತುಕೊಂಡು ಹೆದರಿಸಿ ಬೆದರಿಸಿ ಶುಂಠಿ ಕ್ಯಾಂಪ್ ( ಶೆಡ್ )ನಲ್ಲಿರಿಸಿದ್ದಾರೆ. ಕಾರ್ಮಿಕರ ಕಾವಲಿಗೆ ಗೂಂಡಾಗಳನ್ನ ನೇಮಿಸಿ ಜೀತದಾಳುಗಳ‌ಂತೆ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರು ದಿನವಿಡಿ ನಿರಂತರವಾಗಿ ಹೊಲದಲ್ಲಿ ಕೆಲಸ ಮಾಡಬೇಕು ಒಂದು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಕೆಲಸ ಮಾಡದಿದ್ದರೆ ಕಾವಲುಗಾರರು ದೊಣ್ಣೆಗಳಿಂದ ಮೈ ಬರೆ ಬರುವ ಹಾಗೆ ಹೊಡೆದು ದೌರ್ಜನ್ಯ ಮಾಡುತ್ತಾರೆ ಎಂದು ಕಾರ್ಮಿಕರು ಅಳಲು ‌ತೋಡಿಕೊಂಡಿದ್ದಾರೆ.

ಇದುವೆರೆಗೂ ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಶುಂಠಿ ಕ್ಯಾಂಪ್ ಗಳಲ್ಲಿಟ್ಟು ಬೇರೆ ಬೇರೆ ಕಡೆ ದುಡಿಸಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇದೇ ರೀತಿ ದುಡಿಸಿಕೊಳ್ಳುತ್ತಿದ್ದು ಇದುವರೆಗೂ ಒಂದು ರೂಪಾಯಿ ಕೂಲಿಯನ್ನ ನೀಡಿಲ್ಲ, ಸಂಜೆ ಯಾದ್ರೆ ಮದ್ಯ ನೀಡುತ್ತಾರೆ, ಕೂಲಿ ಕೇಳಿದರೆ ಒಡೆಯುತ್ತಾರೆ ಎಂದು ಕಾರ್ಮಿಕರು ಗದ್ಗದಿತರಾದರು.

ಸ್ಥಳೀಯರ ನೆರವಿನಿಂದ ಹೊನ್ನವಳ್ಳಿ ಪೋಲೀಸರು ಬುಧವಾರ ರಾತ್ರಿ ಶುಂಠಿ ಕ್ಯಾಂಪ್ ಗಳಲ್ಲಿದ್ದ 30 ಜನ ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರನ್ನ ಸಧ್ಯ ಹೊನ್ನವಳ್ಳಿ ಸಮುದಾಯ ಭವನದಲ್ಲಿರಿಸಲಾಗಿದೆ. ಸ್ಥಳಕ್ಕೆ ತಿಪಟೂರು ತಹಸಿಲ್ದಾರ್ ಹಾಗೂ ಕಾರ್ಮಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ವರದಿ: ಮಂಜುನಾಥ್ ಹಾಲ್ಕುರಿಕೆ.

LEAVE A REPLY

Please enter your comment!
Please enter your name here