ಮೋದಿ ದೀರ್ಘಾಯುಷ್ಯಕ್ಕಾಗಿ ….. ಮಹಾ ಮೃತ್ಯುಂಜಯ ಜಪ

ನವದೆಹಲಿ: ಪಂಜಾಬ್‌ ನ ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿ ಅವರಿಗೆ ಕಲ್ಪಿಸಲಾಗಿದ್ದ ಭದ್ರತಾ ವ್ಯವಸ್ಥೆಯಲ್ಲಿ ಲೋಪ ಸಂಭವಿಸಿದ ಘಟನೆಯ ನಂತರ ದೆಹಲಿಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಮಹಾ ಮೃತ್ಯುಂಜಯ ಜಪ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ದೆಹಲಿಯ 194 ಸ್ಥಳಗಳಲ್ಲಿ ಬಿಜೆಪಿ ನಾಯಕರು ಮಹಾ ಮೃತ್ಯುಂಜಯ ಪಠಣ ಸೇರಿದಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಂಜಾಬ್‌ನ ಫಿರೋಜ್‌ಪುರದಲ್ಲಿ ಭದ್ರತಾ ಲೋಪ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳು ಮೇಲ್ಸೇತುವೆಯಲ್ಲಿ ಸುಮಾರು 20 ನಿಮಿಷ ಸಿಲುಕಿಕೊಂಡ ನಂತರ ಈ ಪ್ರಾರ್ಥನೆ ಸಲ್ಲಿಸಲಾಯಿತು.

ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್‌ ಗುಪ್ತಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌ ಕನ್ನಾಟ್‌ ಪ್ಲೇಸ್‌ ನಲ್ಲಿರುವ ಶಿವಾಲಯದಲ್ಲಿ ಪ್ರಾರ್ಥನೆ ನಡೆಸಿದರು. ಪ್ರಧಾನಿ ಮೋದಿ ಅವರ ಪ್ರಾಣಕ್ಕೆ ಅಪಾಯ ತರುವಂತಹ ಕ್ರಮ ನೋಡಿದರೆ ಕಾಂಗ್ರೆಸ್ ಮನಸ್ಥಿತಿ ಏನು ಎಂಬುದು ಗೋಚರಿಸುತ್ತಿದೆ ಎಂದು ಆದೇಶ್ ಗುಪ್ತಾ ವಿಶ್ಲೇಷಿಸಿದರು.

ಪ್ರಧಾನಿ ಮೋದಿ ಇಡೀ ದೇಶಕ್ಕೆ ಸೇರಿದವರು, ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಅಲ್ಲ. ಪ್ರಧಾನಿ ಮೋದಿ ದೇಶದ ಸಂಪತ್ತು, ಅವರ ಭದ್ರತೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಗುಪ್ತಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೀವಕ್ಕೆ ಅಪಾಯ ತರಲು ಸಂಚು ಹೂಡಿದ್ದಾರೆ ಎಂದು ಝಂಡೆವಾಲನ್‌ ಮಂದಿರದ ಬಳಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಆರೋಪಿಸಿದರು. ಮೋದಿ ಲಾಂಗ್‌ ಲೀವ್‌ ಎಂದು ನಡೆಸಿದ ವಿಶೇಷ ಪ್ರಾರ್ಥನೆಯಲ್ಲಿ ಬಿಜೆಪಿ ಶಾಸಕ ಓಂ ಪ್ರಕಾಶ್‌ ಶರ್ಮಾ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!