ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ: ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್.

ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಲಾಂಜ್ ಕೊಠಡಿಯಲ್ಲಿ ಇಂದಿನಿಂದಲೇ ವಾರ್ ರೂಂ/ಕಂಟ್ರೋಲ್ ರೂಂ ತೆರೆದು ವೈದ್ಯಾಧಿಕಾರಿಗಳು ಹಾಗೂ ಆಪರೇಟರ್‌ಗಳನ್ನು ನಿಯೋಜಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಮ್ಮ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರಿ ಆದೇಶದನ್ವಯ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಸ್ಪತ್ರೆ ಸಾಮರ್ಥ್ಯದ ಶೇ.5೦ರಷ್ಟು ಹಾಸಿಗೆ(ಐಸಿಯು, ಆಕ್ಸಿಜನ್ ಬೆಡ್, ಜನರಲ್ ವಾರ್ಡ್ ವಿಭಾಗ)ಗಳನ್ನು ಮೀಸಲಿಡಬೇಕು. ಅದೇ ರೀತಿ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಜನವರಿ 1೦ ರಿಂದ ಎಲ್ಲಾ ವಿಭಾಗಗಳಲ್ಲಿ ಶೇ. 75ರಷ್ಟು ಹಾಸಿಗೆಗಳನ್ನು ಮೀಸಲಿಟ್ಟು ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಕೋವಿಡ್ ಸೋಂಕು ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಟ್ರೈಯೇಜಿಂಗ್ ಸೆಂಟರ್ ತೆರೆದು ಹೋಂ ಐಸೋಲೇಷನ್/ ಕ್ವಾರಂಟೈನ್ ಇರುವ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದರಲ್ಲದೆ, ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ಸ್ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಡ್ರೈ ರನ್ ಮಾಡಬೇಕೆಂದು ನಿರ್ದೇಶನ ನೀಡಿದರು.

ಡಾ: ಮೋಹನ್ ದಾಸ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 3ರಷ್ಟಿದ್ದು, ಯಾರಲ್ಲೂ ಕೋವಿಡ್ ಗುಣಲಕ್ಷಣಗಳು ಕಂಡು ಬಂದಿರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ: ಸನತ್, ಆರ್‌ಸಿಎಚ್ ಅಧಿಕಾರಿ ಡಾ: ಕೇಶವರಾಜ್, ಪಾಲಿಕೆ ಆಯುಕ್ತೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು

error: Content is protected !!