ಕಟ್ಟಡ ಕಾರ್ಮಿಕರಲ್ಲದೆ ಇರುವರೆಗೆ ಕಾರ್ಮಿಕ ಗುರುತಿನ ಚೀಟಿ:ಸಿಐಟಿಯು ಪ್ರತಿಭಟನೆ.

ತುಮಕೂರು: ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಗುರುತಿನ ಚೀಟಿ ಮಾಡಲು ಅವಕಾಶ ನೀಡಿರುವುದರಿಂದ ಹಣದಾಸೆಗೆ ಕಟ್ಟಡ ಕಾರ್ಮಿಕರಲ್ಲದೆ ಇರುವರೆಗೆ ಕಾರ್ಮಿಕ ಗುರುತಿನ ಚೀಟಿ ನೀಡಿರುವುದರಿಂದ ನೈಜ ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳಿಗೆ ಕಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ  ಸಾಮಾನ್ಯ ಸೇವಾ ಕೇಂದ್ರಗಳಿಗೆ ಕಾರ್ಮಿಕರ ಗುರುತಿನ ಚೀಟಿ ನೀಡಲು ಅವಕಾಶ ಕಲ್ಪಿಸಿರುವುದನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ಯಾವುದೇ ತರಹದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳು ಆಗದೇ ಇರುವ ಸ್ಥಳದಲ್ಲಿ ಭಾರಿ ಪ್ರಮಾಣದ ಕಾಮಗಾರಿ ನಡೆದಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿ, ನಕಲಿ ಕಟ್ಟಡ ಮಾಲೀಕರ ಹೆಸರನ್ನು ಸೃಷ್ಟಿಸಿ ಲಕ್ಷಾಂತರ ಜನರು ಕಾರ್ಮಿಕ ಗುರುತಿನ ಚೀಟಿಗೆ ನೋಂದಾಯಿಸಿಕೊಂಡಿದ್ದು, ಇದರಿಂದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು, ಕಲ್ಯಾಣ ಮಂಡಳಿಯ ಹಣ ನಕಲಿ ಕಾರ್ಮಿಕರ ಪಾಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೇವಾಸಿಂಧು ವೆಬ್ ಪೊರ್ಟಲ್‌ನಲ್ಲಿ ಸಿಎನ್‌ಸಿಗೆ ಕಾರ್ಮಿಕರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿರುವ ಉದ್ದೇಶ ಒಳ್ಳೆಯದು ಆದರೆ ಸಿಎನ್‌ಸಿಗಳು ಇದನ್ನು ದುರುಪಯೋಗ ಪಡಿಸಿಕೊಂಡು ಹಣದ ಆಸೆಗಾಗಿ ಕಾರ್ಮಿಕರ ಹಿತವನ್ನು ಬಲಿಕೊಟ್ಟಿದ್ದು, 18 ವರ್ಷ ತುಂಬಿದ ಎಲ್ಲ ಸದಸ್ಯರಿಗೆ ಕಾರ್ಮಿಕ ಗುರುತಿನ ಚೀಟಿ ಮಾಡಿಕೊಟ್ಟಿದ್ದು,  ಸಿಎನ್‌ಸಿಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆದು ಕೇಂದ್ರ ಕಾರ್ಮಿಕ ಸಂಘಟನೆಯ ಕಚೇರಿಯಲ್ಲಿ ಮತ್ತು ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಮಾತ್ರ ನೋಂದಣಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ೨೦೧೫ರಿಂದ ಸಲ್ಲಿಸಿರುವ ಪಿಂಚಣಿ ಅರ್ಜಿಗಳಿಗೆ ಹಾಗೂ ಸೇವಾ ಸಿಂಧು ತಂತ್ರಾಂಶದಲ್ಲಿ ಸಲ್ಲಿಸಿರುವ ಪಿಂಚಣಿ ಅರ್ಜಿಗಳಿಗೆ ಇದುವರೆಗೆ ಧನಸಹಾಯವೇ ಬಂದಿಲ್ಲ, ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಪಿಂಚಣಿ ಮತ್ತು ಇತರೆ ಸೌಲಭ್ಯದ ಅರ್ಜಿ ಸಲ್ಲಿಸಿದ್ದರು ಸಹ, ಅರ್ಜಿಗಳನ್ನು ಪರಿಶೀಲನೆ ಮಾಡಿ ಮಂಜೂರಾತಿಗೆ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ದೂರಿದರು.

ಅರ್ಜಿ ಸಲ್ಲಿಸುವಾಗಲೇ ಜೀವಿತ ಪ್ರಮಾಣ ಪತ್ರ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರು ಸಹ ಅರ್ಜಿಗಳನ್ನು ಮಂಜೂರಾತಿಗೆ ಕಳುಹಿಸಿಲ್ಲ, ಫಲಾನುಭವಿಗಳು ವರ್ಷಕ್ಕೊಮ್ಮೆ ಜೀವಿತ ಪ್ರಮಾಣಪತ್ರವನ್ನು ನೀಡಿದ್ದರು ಸಹ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ, ಪಿಂಚಣಿಗೆ 2019 ರಲ್ಲಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ೧೮ ತಿಂಗಳಾದರೂ ಪಿಂಚಣಿ ಮಂಜೂರಾಗಿಲ್ಲ, ಅರ್ಜಿ ಸಲ್ಲಿಸಿದವರಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಇಲ್ಲಿಯವರೆಗೆ ಪ್ರತಿ ತಿಂಗಳ ಪಿಂಚಣಿಯನ್ನು ನೀಡಬೇಕೆಂದು ಆಗ್ರಹಿಸಿದರು.

ಕೋವಿಡ್‌ನಿಂದಾಗಿ ಧನ ಸಹಾಯದ ಅರ್ಜಿಗಳನ್ನು ಸಲ್ಲಿಸಲು ಮಾ.31 ರವರೆಗೆ ಕಾಲಾವಕಾಶ ನೀಡಲಾಗಿದ್ದು,2019 ರ ಶೈಕ್ಷಣಿಕ ವರ್ಷದಲ್ಲಿ ಉತೀರ್ಣರಾದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ತೆರೆಯದೇ ಇರುವುದರಿಂದ ಮತ್ತು ತಡವಾಗಿ ತರಗತಿಗಳು ಪ್ರಾರಂಭವಾಗಿರುವುದರಿಂದ ಅಂಕಪಟ್ಟಿಗಳನ್ನು ಪಡೆಯಲು ವಿಳಂಬವಾಗುತ್ತಿದ್ದು, ಜೂ.೩೦ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಎರಡು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಭವಿಷ್ಯ ನಿಧಿಯನ್ನು ಬಳಸಲು ಹುನ್ನಾರ ರೂಪಿಸಿದ್ದು, ಕಟ್ಟಡ ಕಾರ್ಮಿಕರ ಭವಿಷ್ಯ ನಿಧಿ ದುರುಪಯೋಗವಾಗದಂತೆ ಕಾರ್ಮಿಕರು ಎಚ್ಚರಿಕೆ ವಹಿಸಬೇಕು, ಸಂಘಟಿತವಾಗಿ ಹೋರಾಡಿದರೆ ಮಾತ್ರ ಕಟ್ಟಡ ಕಾರ್ಮಿಕರ ನಿಧಿಯನ್ನು ಉಳಿಸಿಕೊಳ್ಳಬಹುದಾಗಿದ್ದು, ಕಟ್ಟಡ ಕಾರ್ಮಿಕರು ಎಚ್ಚರಿಕೆ ವಹಿಸುವುದು ಅವಶ್ಯಕ ಎಂದು ಸಲಹೆ ನೀಡಿದರು.

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕಾರ್ಮಿಕ ಇಲಾಖೆ ಸಚಿವರಿಗೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ದೇವರಾಜು, ಶಿರಾ ತಾಲ್ಲೂಕು ಕಾರ್ಯದರ್ಶಿ ಭೂತರಾಜು, ಕೊರಟಗೆರೆ ತಾಲ್ಲೂಕು ಕಾರ್ಯದರ್ಶಿ ಗೋವಿಂದರಾಜು, ಮಧುಗಿರಿ ತಾಲ್ಲೂಕು ಕಾರ್ಯದರ್ಶಿ ರಂಗಧಾಮಯ್ಯ, ಚಿಕ್ಕಣ್ಣ, ಗಂಗಾಧರಪ್ಪ, ಶಿರಾ ತಾಲ್ಲೂಕಿನ ಹನುಮಂತರಾಯಪ್ಪ, ರುದ್ರಪ್ಪ, ದೊಡ್ಡಲಿಂಗಯ್ಯ, ಕುಪ್ಪೂರು ವೆಂಕಟೇಶ್,ದೊಡ್ಡ ತಿಮ್ಮಯ್ಯ, ದೇವಿಕಾ.ಎ. ಶಾಂತಮ್ಮ, ಲಕ್ಷ್ಮಮ್ಮ, ಚಂದ್ರಮ್ಮ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!