ಕಿಚ್ಚನ ಕೋಟಿಗೊಬ್ಬ 3 ಸಿನಿಮಾ ವಿಮರ್ಶೆ.

ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ- 3 ಸಿನಿಮಾ ರಾಜ್ಯಾಧ್ಯಂತ ಅದ್ದೂರಿಯಾಗಿ ತೆರೆಕಂಡಿದ್ದು ಬಾಕ್ಸ್ ಆಫಿಸ್ ನಲ್ಲಿ ದೂಳೆಬ್ಬಿಸುತ್ತಿದೆ. ಸಿನಿಮಾ ತಂಡದ ಗೊಂದಲದಿಂದ ಒಂದು ದಿನ ತಡವಾಗಿ ಚಿತ್ರ ಬಿಡುಗಡೆಯಾದರೂ, ಪ್ರೇಕ್ಷಕರು ಅದರಲ್ಲೂ ಕಿಚ್ಚ ಅಭಿಮಾನಿಗಳು ಸಿನಿಮಾಗೆ ರತ್ನಗಂಬಳಿ ಹಾಸಿದ್ದಾರೆ. ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿ ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುವ ರೀತಿ ಬೇರೆ ಬೇರೆಯದ್ದಾಗಿರುತ್ತದೆ. ಕೆಲವರು ಚಿತ್ರದಲ್ಲಿ ಕಥೆ ಇದೆಯಾ, ಲಾಜಿಕ್ ಇದೆಯಾ ಎನ್ನುವುದಕ್ಕೆ ಆದ್ಯತೆ ಕೊಟ್ಟರೆ, ಪೈಸಾ ವಸೂಲ್, ಮನೋರಂಜನೆ ಇದ್ದರೆ ಸಾಕು ಎನ್ನುವ ವರ್ಗದವರೂ ಇರುತ್ತಾರೆ. ಕೋಟಿಗೊಬ್ಬ ಚಿತ್ರ ಪೈಕಿ ಎರಡನೇ ವರ್ಗದವರಿಗೆ ಹಿಡಿಸಬಹುದು.

ಸಿನಿಮಾ ಬಿಡೂಗಡೆಗೂ ಮುನ್ನ ವಿಭಿನ್ನ ಗೆಟ್ ಅಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಹರಿಯಬಿಡುವ ಮೂಲಕ, ಪ್ರೇಕ್ಷಕರ ಕ್ರೇಜ್ ಅನ್ನು ಮತ್ತಷ್ಟು ಹೆಚ್ಚಿಸಿದ್ದರು. ಬೀಡಿ ಸೇದುತ್ತಾ ಬರುವ ಮುದುಕನ ವೇಷದ ಗೆಟ್ ಅಪ್ ಸುದೀಪ್ ಅವರ ಇಂಟ್ರಡಕ್ಷನ್ ಸೀನ್ ಆಗಿರುತ್ತದೆ. ಸಿನಿಮಾಗೆ ಒನ್ ಲೈನ್ ಕಥೆಯನ್ನು ಬರೆದವರು ಖುದ್ದು ಸುದೀಪ್ ಅವರೇ..ತಮಿಳಿನ ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ – ೩ಯಲ್ಲಿ (ಕೆ 3) ಕಲಾವಿದರ ದಂಡೇ ಇದೆ. ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್, ಪ್ರಮುಖ ವಿಲನ್ ಆಗಿ ನವಾಬ್ ಶಾ, ಇಂಟರ್ ಪೋಲ್ ಅಧಿಕಾರಿಯಾಗಿ ಅಫ್ತಾಬ್ ಶಿವದಾಸಿನಿ, ಪೊಲೀಸ್ ಅಧಿಕಾರಿಣಿಯಾಗಿ ಶ್ರದ್ದಾ ದಾಸ್, ಜೈಲಿನಲ್ಲಿರುವ ಪೊಲೀಸ್ ಅಧಿಕಾರಿಯಾಗಿ ರವಿಶಂಕರ್, ನಾಯಕನ ತಾಯಿಯ ಪಾತ್ರದಲ್ಲಿ ಅಭಿರಾಮಿ, ವಿಲನ್ ಆಪ್ತನಾಗಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ.

ಸತ್ಯ ಮತ್ತು ಶಿವ ಎನ್ನುವ ಎರಡು ಪಾತ್ರದಲ್ಲಿ ಸತ್ಯ ಎನ್ನುವ ಕ್ಯಾರೆಕ್ಟರ್ ಮಾತ್ರ ಕೋಟಿಗೊಬ್ಬ -2 ಕ್ಲೈಮ್ಯಾಕ್ಸಿನಲ್ಲಿ ಉಳಿದುಕೊಂಡಿರುತ್ತದೆ. ಸತ್ಯ ಮತ್ತು ಪ್ರೇಕ್ಷಕನನ್ನು ಗೊಂದಲಕ್ಕೆ ದೂಡುವ ಇನ್ನೊಂದು ಪಾತ್ರ ಯಾವುದು ಎನ್ನುವ ಸಸ್ಪೆನ್ಸ್ ಅನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ತೆರೆಯ ಮೇಲೆ ತಂದಿದ್ದಾರೆ. ಜೊತೆಗೆ, ಘೋಸ್ಟ್ ಪಾತ್ರವನ್ನು ತಂದು, ಇನ್ನಷ್ಟು ಹುಳ ಬಿಟ್ಟಿದ್ದಾರೆ. ತನ್ನ ಆಶ್ರಮದ ಹುಡುಗಿಗೆ ಅಪರೂಪದ ಕಾಯಿಲೆ ಎದುರಾದಾಗ, ಅದರ ಚಿಕಿತ್ಸೆಗಾಗಿ ಪೋಲೆಂಡಿಗೆ ಹೋಗುವ ನಾಯಕನಿಗೆ ನಾಯಕಿಯ ಪರಿಚಯವಾಗುತ್ತದೆ. ಎಲ್ಲಾ ಚಿತ್ರದಂತೆ, ಇಲ್ಲೂ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.

ಪೋಲೆಂಡ್ ನಲ್ಲಿ ನಡೆಯುವ ಸಾಲುಸಾಲು ಬಾಂಬ್ ಬ್ಲ್ಯಾಸ್ಟ್, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಭರಣಗಳ ಕಳ್ಳತನದ ಹಿಂದೆ ಘೋಸ್ಟ್ ಪಾತ್ರವಿದೆ ಎಂದು ಇಂಟರ್ ಪೋಲ್ ಪೊಲೀಸರು ಮತ್ತು ವಿಲನ್, ಅವನನ್ನೇ ಹೋಲುವ ಸತ್ಯನ ಹಿಂದೆ ಬೀಳುತ್ತಾರೆ, ಸತ್ಯ ಜೈಲು ಪಾಲಾಗುತ್ತಾನೆ. ಅಲ್ಲಿ, ಎಸಿಪಿ ಕಿಶೋರ್ (ರವಿಶಂಕರ್) ಅವರ ಪರಿಚಯವಾಗುತ್ತದೆ. ಅಲ್ಲಿಂದ ಇಬ್ಬರೂ ಜೈಲಿನಿಂದ ತಪ್ಪಿಸಿಳ್ಳುತ್ತಾರೆ. ಮುಂದೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಮೂಲಕ ಸತ್ಯ-ಘೋಸ್ಟ್ ಪಾತ್ರಗಳು ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುತ್ತದೆ.

ಸತ್ಯ-ಶಿವ-ಘೋಸ್ಟ್ ಪಾತ್ರಗಳು ಎಲ್ಲವೂ ಒಂದೇನಾ, ನಾಯಕ ಯಾವ ಕಾರಣಕ್ಕಾಗಿ ವಿಲನ್ ಮೇಲೆ ನಾಯಕ ಪ್ರತೀಕಾರ ತೆಗೆದುಕೊಳ್ಳುತ್ತಾನೆ ಎನ್ನುವ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ. ಇಡೀ ಚಿತ್ರದಲ್ಲಿ ಸುದೀಪ್ ಲೀಲಾಜಾಲವಾಗಿ ನಟಿಸಿದ್ದಾರೆ. ನಾಯಕಿ ಮಡೋನಾ, ಶ್ರದ್ದಾ ದಾಸ್, ಅಫ್ತಾಬ್ ಶಿವದಾಸಿನಿ, ನವಾಬ್ ಶಾ, ರಂಗಾಯಣ ರಘು, ರಾಜೇಶ್ ನಟರಂಗ, ತಬ್ಲಾ ನಾಣಿ ಮುಂತಾದವರು ತಮ್ಮತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು, ರವಿಶಂಕರ್ ಮತ್ತು ಸುದೀಪ್ ಜುಗಲ್ ಬಂಧಿಯೇ ಚಿತ್ರದ ಸೆಕೆಂಡ್ ಹಾಫ್ ಹೈಲೆಟ್.

ಪೋಲೆಂಡ್ ಗೆ ಹೋಗಿದ್ದರೂ, ಕೆಲವೊಂದು ಕಡೆ ಗ್ರಾಫಿಕ್ಸ್ ಬಳಸಿರುವುದು ದೊಡ್ಡ ಪರದೆಯ ಮೇಲೆ ಅಭಾಸ ಅನಿಸುತ್ತದೆ. ಕೋಟಿಗೊಬ್ಬ –ಸಿನಿಮಾದ ನಾಯಕಿ ನಿತ್ಯಾ ಮೆನನ್ ಬಗ್ಗೆ ಚಿತ್ರದಲ್ಲಿ ಪ್ರಸ್ತಾವವೇ ಇಲ್ಲ. ಮೊದಲಾರ್ಥದ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಬಹುದಿತ್ತು. ವಿಲನ್ ಮತ್ತು ಇಂಟರ್ ಪೋಲ್ ಅಧಿಕಾರಿಗಳ ಡೈಲಾಗುಗಳು ಇಂಗ್ಲಿಷ್ ಮಯವಾಗಿದ್ದರಿಂದ, ಅಲ್ಲಿ ಕನ್ನಡ ಟೈಟಲ್ ಬಳಸಬಹುದಿತ್ತು.. ಹೀಗೆ, ಚಿತ್ರದಲ್ಲಿ ಕೆಲವೊಂದು ನ್ಯೂನ್ಯತೆಗಳಿವೆ. ಆದರೆ, ಸಿನಿಮಾದ ವೇಗ, ಸುದೀಪ್ ಸೇರಿದಂತೆ ನಟರ ಪರ್ಫಾರ್ಮೆನ್ಸ್ ಇದನ್ನೆಲ್ಲಾ ಮರೆಯುವಂತೆ ಮಾಡುತ್ತದೆ. ಒಟ್ಟಿನಲ್ಲಿ, ಯಾವುದೇ ಲಾಜಿಕ್ ನೋಡದೇ, ಮನೋರಂಜನೆಯಿಂದ ಕೂಡಿದ ಪಕ್ಕಾ ಫ್ಯಾಮಿಲಿ ಸಿನಿಮಾ ಇದು.

Leave a Reply

Your email address will not be published. Required fields are marked *

error: Content is protected !!