Karnataka Byelections: ಹಾನಗಲ್ ಹಾಗೂ ಸಿಂದಗಿಯಲ್ಲಿ ಮತದಾನ; ಚುನಾವಣೆ ಕುರಿತ ಮಾಹಿತಿ ಇಲ್ಲಿದೆ

ಹಾವೇರಿ: ಕರ್ನಾಟಕದ ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಅಕ್ಟೋಬರ್ 30) ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಚುನಾವಣಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಇಂದು ಮತದಾರ ತನ್ನ ನಿರ್ಧಾರವನ್ನು ಮತಗಳ ಮೂಲಕ ನೀಡಲಿದ್ದಾನೆ. ವಿಜಯಪುರದ ಸಿಂದಗಿ ಕ್ಷೇತ್ರದಲ್ಲಿ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಶೇಕಡಾ 51.6 ರಷ್ಟು ಮತದಾನ ಆಗಿತ್ತು ಎಂದು ತಿಳಿದುಬಂದಿದೆ. ಹಾಗೇ ಹಾನಗಲ್ ಉಪಚುನಾವಣೆಗೆ ಸಂಬಂಧಿಸಿ ಶೇಕಡಾ 62.72 ರಷ್ಟು ಮತದಾನ ಆಗಿತ್ತು.

ಸಿಂದಗಿ‌ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಸಾಯಂಕಾಲ 5 ಗಂಟೆಯ ಮಾಹಿತಿಯಂತೆ ಸಿಂದಗಿಯಲ್ಲಿ ಶೇಕಡಾ 64.54 ರಷ್ಟು ಮತದಾನ ಆಗಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಸಂಜೆ 5 ಗಂಟೆಯ ವೇಳೆಗೆ ಶೇಕಡಾ 77.9 ರಷ್ಟು ಮತದಾನ ಆಗಿದೆ. ಅದರಂತೆ ಸಿಂದಗಿಗೆ ಹೋಲಿಕೆ ಮಾಡಿದರೆ ಹಾನಗಲ್ ಕ್ಷೇತ್ರದಲ್ಲಿ ಉತ್ತಮ ಮತದಾನ ನಡೆದಿದೆ.

ಹಾನಗಲ್ ಬೈ ಏಲೆಕ್ಷನ್ ಮತದಾನ ಹಿನ್ನಲೆ ಮಧ್ಯಾಹ್ನದ ಹೊತ್ತಿಗೆ ನೀರಸ ಪ್ರತಿಕ್ರಿಯೆ ಕಂಡುಬಂದಿತ್ತು. ಮತದಾರ ಮತಗಟ್ಟೆಯತ್ತ ಸುಳಿಯುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಗ್ರಾಮೀಣ ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾನಗಲ್ ತಾಲೂಕಿನ ಅಕ್ಕಿ ಆಲೂರು ಸೇರಿದಂತೆ ಅನೇಕ ಕಡೆ ನೀರಸ ಪ್ರತಿಕ್ರಿಯೆ ಕಂಡುಬಂದಿತ್ತು. ಆದರೆ ಮಧ್ಯಾಹ್ನದ ನಂತರ ಗ್ರಾಮೀಣ ಭಾಗದ ಕೆಲವೆಡೆ ಮತದಾನ ವೇಗ ಪಡೆದುಕೊಂಡಿತ್ತು. ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

error: Content is protected !!